ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ

ಗುಬ್ಬಿ.ಮಾ.11.ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಿ.ರಾಜ್ಯಘಟಕ- ಧಾರವಾಡ,ತುಮಕೂರು ಜಿಲ್ಲೆಯಗುಬ್ಬಿ ತಾಲ್ಲೂಕು ಘಟಕದ ವತಿಯಿಂದ ಹಾಗೂ ಭಾರತ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ, ಗುಬ್ಬಿ ಇವರ ಸಹಯೋಗದಲ್ಲಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ ಎಸ್ ಮುಳ್ಳೂರ ರವರ ಮಾರ್ಗದರ್ಶನದಲ್ಲಿ ದಿನಾಂಕ 11-03-2023 ರ ಶನಿವಾರ ಅಪರಾಹ್ನ ಗುಬ್ಬಿಯ ಶ್ರೀಮಾತಾ ಸಮುದಾಯ ಭವನದಲ್ಲಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಹಾಗೂ “ಸಾಧಕರಿಗೆ ಸನ್ಮಾನ” ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಬ್ಬಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಎಸ್ ವಿ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸೋಮಶೇಖರ್ ರವರು,ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀಯುತ ಮಧುಸೂದನ್ ರವರು,ಖ್ಯಾತ ವಕೀಲರಾದಂತಹ ಶ್ರೀಮತಿ ಪುಷ್ಪಾವತಿ ರವರು ಮತ್ತು ಶ್ರೀಮತಿ ಮಂಗಳರವರು.ತಾಲ್ಲೂಕಿನ ಮುಖಂಡರುಗಳಾದಂತಹ ಶ್ರೀಯುತ ಬೆಟ್ಟಸ್ವಾಮಿರವರು, ಶ್ರೀಯುತ ದಿಲೀಪ್ ಕುಮಾರ್ ರವರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದಂತಹ ಶ್ರೀಮತಿ ಗಾಯತ್ರಿ ನಾಗರಾಜ್ ರವರು ಭಾರತ ಸ್ಕೌಟ್ಸ್ ಗೈಡ್ಸ್ ನ ಅಧ್ಯಕ್ಷರು, ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರುಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಗಳು ಹಾಗೂ ಎಲ್ಲಾ ಸಿ ಆರ್ ಪಿ ಗಳು ಬಿ ಆರ್ ಪಿ ಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಲತಾ ಮಣಿಯವರು ನಡೆಸಿಕೊಟ್ಟರೆ,ಗುಬ್ಬಿ ತಾಲೂಕು ಘಟಕದ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಅನಿತ ವಿ ಎಸ್ ರವರು ಎಲ್ಲರನ್ನು ಸ್ವಾಗತಿಸಿದರು. ಸಂಸ್ಥಾಪಕ ರಾಜ್ಯಾಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಶ್ರೀಮತಿ ಸೂರ್ಯಕಲಾ ರವರು ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿದರು.ತದನಂತರ ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಸಿದರು.ಕಾರ್ಯಕ್ರಮದಲ್ಲಿ ವಿಶ್ವ ಮಹಿಳಾ ದಿನದ ಆಶೋತ್ತರಗಳ ಮೂಲಕ,ಮಹಿಳೆಯರ ಸ್ಥಾನಮಾನ,ಹಾಗೂ ಪುರುಷರ ಸರಿ ಸಮಾನ ಸಾಧನೆಗೈದ ಮಹಿಳಾ ಸಾಧಕಿಯರನ್ನು ನೆನಯುವ ಮೂಲಕ ಎಲ್ಲಾ ಅತಿಥಿಗಳು ತಮ್ಮ ಭಾಷಣದಲ್ಲಿ ಮಾತನಾಡಿದರು.ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಏರ್ಪಡಿಸಿದ್ದ ಉಪನ್ಯಾಸವೂ ಸಹಾ ಅತ್ಯುತ್ತಮವಾಗಿತ್ತು. ಹೆಣ್ಣುಮಕ್ಕಳ ರಕ್ಷಣಾ ಕಾಯ್ದೆಗಳ ವಿಚಾರ ಧಾರೆಯನ್ನು ಬಹಳ ಉತ್ತಮವಾಗಿ ತಿಳಿಸಿಕೊಟ್ಟರು

ಅನಂತರ ಹೋಬಳಿಗೆ ಒಂದರಂತೆ ತಾಲೂಕಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಶಿಕ್ಷಕಿಯರಿಗೆ ಅತ್ಯುತ್ತಮ ಸಾಧಕಿ ಎಂದು ಗುರುತಿಸಿ ಅವರಿಗೆ ಗುರು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆರು ಜನ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಆರು ಜನರನ್ನು ಗುರುತಿಸಿ ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ತಾಲ್ಲೂಕಿನ ಸಾಧಕಿಯರೆಂದು ಗುರ್ತಿಸಿ ಸನ್ಮಾನ ಮಾಡಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರುಗಳನ್ನು ಸಹಾ ಕಾರ್ಯಕ್ರಮದ ನೆನಪಿನ ಕಾಣಿಕೆ ನೀಡುವುದರ ಮೂಲಕ ಗೌರವ ಸಮರ್ಪಣೆಯನ್ನು ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಲಕ್ಷ್ಮೀ ರವರು ತಮ್ಮ ಅಧ್ಯಕ್ಷೀಯ ಬಾಷಣದಲ್ಲಿ ತಾಲ್ಲೂಕಿನಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿರುವ ಮಹಿಳಾ ದಿನಾಚರಣೆ ಮಹತ್ವವನ್ನು ತಿಳಿಸಿಕೊಟ್ಟರು. ಶ್ರೀಮತಿ ಮಂಜಮ್ಮ ಖಜಾಂಚಿಗಳು ಎಲ್ಲರನ್ನು ವಂದಿಸಿದರು.. ಸಹಕಾರ ನೀಡಿದಂತ ಶ್ರೀ ಸುರೇಶ್ ರವರು ಶ್ರೀ ರಂಗಪ್ಪ ನವರು, ಶ್ರೀ ರಂಗಸ್ವಾಮಿ ರವರು ಶ್ರೀ ರವೀಶ್ ರವರುಹಾಗೂ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

“ಪ್ರತಿಭಾನ್ವಿತ ಪ್ರತಿಭಾ ಅವರಿಗೊಲಿದ ಗೌರವ ಡಾಕ್ಟರೇಟ್”

ಪ್ರತಿಭಾ.ಆರ್. M.Sc., M.ed., M.Phil., KES, KSET, KAS ಇವರ ಶೈಕ್ಷಣಿಕ ಪದವಿಗಳನ್ನು ನೋಡಿದರೆ ಸಾಕು ಇವರೆಂತಾ ಸಾಧಕರಿರಬಹುದೆಂದು ತಿಳಿಯುತ್ತದೆ. ಇವರ ಸಾಧನೆಗೆ “ಏಶಿಯಾ ವೇದಿಕ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ” ದಿನಾಂಕ 25:02:2023 ರಂದು ಗೌರವ ಡಾಕ್ಟರೇಟ್ ನೀಡಿದೆ.

B.sc ಯಲ್ಲಿ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಟಿ.ಎನ್. ಚತುರ್ವೇದಿ ಅವರಿಂದ ಎರಡು ಬಂಗಾರದ ಪದಕ ಗಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
M.Sc. (ಪ್ರಾಣಿಶಾಸ್ತ್ರ) ಯಲ್ಲಿ ಪ್ರಥಮ RANK ಪಡೆದಿರುತ್ತಾರೆ.

ಇವರು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ,
ಮೊದಲ ವೃತ್ತಿ ಬದುಕನ್ನು ಚಿತ್ರದುರ್ಗದಲ್ಲಿ ಆರಂಭಿಸುತ್ತಾರೆ. ಮುಂದೆ ಪ್ರೌಢ ಶಾಲಾ ಶಿಕ್ಷಕಿಯಾಗಿ ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿ ಕಾಯಕ (ವಿಜ್ಞಾನ ಬೋಧಕರಾಗಿ). ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳ ಬೌದ್ದಿಕ ಮಟ್ಟ ಹೆಚ್ಚಿಸಿ, ವಿಜ್ಞಾನದಲ್ಲಿ ಆಸಕ್ತಿ ಹೆಚ್ಚಿಸಿ, ಪ್ರಾಯೋಗಿಕ ಅನ್ವಯಿಕ ವಿಜ್ಞಾನಕ್ಕೆ ಒತ್ತು ನೀಡಿ, ಓದಿನಲ್ಲಿ ಮಕ್ಕಳನ್ನ ತೊಡಗುವಂತೆ ಪ್ರೇರಣೆ ನೀಡಿ SSLC ಫಲಿತಾಂಶದಲ್ಲಿ ಗಣನೀಯ ಹೆಚ್ಚಳ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಮುಂದೆ KES ಆಗಿ ತುಮಕೂರಿನ ಶಿರಾ ತಾಲೂಕಿನ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಆಯ್ಕೆ. ಅಲ್ಲಿಯೂ ವಿದ್ಯಾರ್ಥಿಗಳಿಗೆ ಮೆಚ್ಚಿನ ಉಪನ್ಯಾಸಕಿಯಾಗಿ ಭವಿಷ್ಯದ ಬಾವಿ ಶಿಕ್ಷಕರನ್ನು ರೂಪುಗೊಳಿಸಲು ಕಾರ್ಯ ನಿರ್ವಹಿಸಿದ್ದಾರೆ.

ಮುಂದೆ ತವರು ಜಿಲ್ಲೆಯಾದ ತುಮಕೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ,ವಿಜ್ಞಾನ ವಿಷಯ ಪರಿವೀಕ್ಷಕರಾಗಿ (subject Inspector) ನೇಮಕವಾಗಿ, ಜಿಲ್ಲೆಯಾದ್ಯಾಂತ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಬೋಧನಾ ಗುಣಮಟ್ಟ ಹೆಚ್ಚಿಸಿದ್ದಲ್ಲದೆ, ಅಲ್ಲಿನ ಕಲಿಕಾ ಕುಂದು ಕೊರತೆಗಳನ್ನ ನಿವಾರಿಸಿ, ಮಕ್ಕಳಲ್ಲಿ ಅಡಗಿದ್ದ ಜ್ಞಾನವನ್ನು ಹೊರ ತೆಗೆಯಲು ಶ್ರಮಿಸಿದ್ದಾರೆ. ಜಿಲ್ಲೆಯ SSLC ಫಲಿತಾಂಶ ಉತ್ತಮಪಡಿಸಲು ಶ್ರಮಿಸಿದ್ದಾರೆ‌. ತುಮಕೂರಿನಲ್ಲಿ ಇಸ್ರೋದ‌‌ ಬಾಹ್ಯಾಕಾಶ ಸಪ್ತಾಹವನ್ನು ಇವರು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ. ಇಸ್ರೋಗೂ ಕರೆದೊಯ್ದು ವಿದ್ಯಾರ್ಥಿಗಳ ಜ್ಞಾನ ಕ್ಷಿತಿಜ ವಿಸ್ತರಿಸಲು ಪರಿಶ್ರಮಿಸಿರುತ್ತಾರೆ. ಎಂದೂ ಶಿಕ್ಷಕರೊಂದಿಗೆ ಅಧಿಕಾರಿಯಾಗಿ ದರ್ಪ ತೋರದೆ, ಸ್ನೇಹಭಾವದಿಂದ ರಚನಾತ್ಮಕ, ಗುಣಾತ್ಮಕ ಸಲಹೆಗಳನ್ನು ನೀಡಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಶ್ರಮಿಸಿರುತ್ತಾರೆ.

ಇವರು ಬಹುಮುಖ ಪ್ರತಿಭೆಯಾಗಿದ್ದು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಾ ಉತ್ತಮ ಆದರ್ಶಗಳನ್ನು ಹೊಂದಿರುತ್ತಾರೆ. ಉತ್ತಮ ವಾಗ್ಮಿಗಳಾಗಿರುವ ಇವರು ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಉಪನ್ಯಾಸಗಳನ್ನು ನೀಡಿರುತ್ತಾರೆ. ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ನೀಡಿರುತ್ತಾರೆ.

ಈಗ ಪ್ರಸ್ತುತ ಅವರು KAS ಆಗಿದ್ದು, ತಹಶಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ..

ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿರುವ ಇವರು ಸಾರ್ವಜನಿಕ ಸೇವೆಯ ಕ್ಷೇತ್ರದಲ್ಲಿಯೂ ಗುಣಾತ್ಮಕ ಸೇವೆ ನೀಡಿ ಜನರ ಕಣ್ಣೀರು ಒರೆಸುವಂತಹ ದಕ್ಷ ಅಧಿಕಾರಿಯಾಗುವ ಕನಸನ್ನು ಹೊಂದಿರುತ್ತಾರೆ.

ಕುಟುಂಬದ ಹಿನ್ನಲೆ:
ರಾಮಚಂದ್ರಪ್ಪ ಸಾವಿತ್ರಮ್ಮ ದಂಪತಿಗಳ ಪುತ್ರಿ. ತಂದೆ ನಿವೃತ್ತ ಇಂಜಿನಿಯರ್ ತಾಯಿ ಗೃಹಿಣಿ. ಇವರ ಪತಿ ಶ್ರೀ ಪರಮೇಶ.ಜೆ.ಎಲ್. ಮೂಲತಃ ಹಾಸನ ಜಿಲ್ಲೆಯ ಜಾವಗಲ್ ನವರು, ಇವರು ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕರು, ಖ್ಯಾತ ಮಾನವತವಾದಿಗಳು ಸಮಾಜ ಮುಖಿ ಜೀವಿಗಳು, ಅವರ ಶ್ರೀಮತಿ ಉನ್ನತ ಹುದ್ದೇಗೇರಬೇಕೆಂಬುದು ಇವರ ಹಿರಿದಾದ ಆಸೆ, ಪತಿಯ ಆಸೆಯಂತೆ ಒಂದೊಂದೆ ಮೆಟ್ಟಿಲು ಹತ್ತುತ್ತಾ ಇವತ್ತು ತಹಶಿಲ್ದಾರ ಆಗಿದ್ದಾರೆ ಶ್ರೀಮತಿ ಪ್ರತಿಭಾ ಅವರು.
ಪ್ರತಿಭಾ ಅವರೇ ಹೇಳುವಂತೆ, ಪತಿಯ ಒತ್ತಾಸೆಯಿಂದಲೇ ಇಂದು ಈ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ. ಜೊತೆಗೆ ಇವರ ಮಡಲಿಗೊಂದು ಕರುಳಿನ ಕುಡಿ, ರೋಹಿತ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇವರ ತಂದೆಯವರು ವೃತ್ತಿ ಜೀವನದುದ್ದಕ್ಕೂ ಆದರ್ಶಗಳನ್ನು ಇಟ್ಟುಕೊಂಡು ಬದುಕಿದವರು‌ ಈಗಲೂ ಅದೇ ನಡೆ ನುಡಿ. ತಾಯಿ ಸಾವಿತ್ರಮ್ಮ ಕೂಡ ಸದ್ಗೃಹಿಣಿ, ಮಗಳ ಸಾಧನೆಗೆ ಸದಾ ಸಾತ್ ನೀಡಿದವರು. ಹೀಗೆ ಹತ್ತು ಹಲವಾರು ಪುರಸ್ಕಾರಗಳು ಇವರ ಅಮೋಘವಾದ ಸೇವೆಯನ್ನು ಮೆಚ್ಚಿ ಇವರನ್ನ ಹುಡುಕಿಕೊಂಡು ಬರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಮತ್ತು ಹಿರಿಯ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ

ಕುಣಿಗಲ್ ಜ.29.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ತುಮಕೂರು, ತಾಲೂಕು ಘಟಕ ಕುಣಿಗಲ್ ವತಿಯಿಂದ ದಿನಾಂಕ 27.01.2023ರ ಸಂಜೆ 4 ಗಂಟೆಗೆ ಗರ್ಲ್ಸ್ ಹೈ ಸ್ಕೂಲ್,ದೊಡ್ಡಪೇಟೆ, ಕುಣಿಗಲ್ ಇಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಮತ್ತು ಹೋಬಳಿವಾರು ಹಿರಿಯ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಗೀತಾಂಜಲಿ ಮೇಡಂರವರ ಅಧ್ಯಕ್ಷತೆಯಲ್ಲಿ ಮತ್ತು ಎಲ್ಲ ಪದಾಧಿಕಾರಿಗಳ ಸಹಕಾರದಲ್ಲಿ ಬಹಳ ಅದ್ದೂರಿಯಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಪಿ.ಎಸ್ ಅನುಸೂಯಾದೇವಿ ರವರು, ಕುಣಿಗಲ್ ತಾಲೂಕಿನ ಬಿ.ಇ.ಒ, ಬಿ. ಆರ್. ಸಿ, ಇ. ಸಿ.ಒ ರವರು, ಹಾಗೂ ಶಿಕ್ಷಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಕಾರ್ಯ ಚಟುವಟಿಕೆಗಳನ್ನು ಪ್ರಶಂಸಿಸಿ, ಮುಂದೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಹೋಬಳಿವಾರು ಹಿರಿಯ ಶಿಕ್ಷಕಿಯರ ಉತ್ತಮ ಸೇವೆಗಳನ್ನು ಗುರ್ತಿಸಿ, ಗೌರವ ಸಮರ್ಪಣೆ ಮಾಡಿ ಸನ್ಮಾನ ಮಾಡಲಾಯಿತು. ಕುಣಿಗಲ್ ತಾಲೂಕಿನ ಈ ಕಾರ್ಯಕ್ರಮವು ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಮಾದರಿಯಾಗಿದ್ದು ಕಾರ್ಯಕ್ರಮ ಅತ್ಯದ್ಭುತ ಯಶಸ್ವಿಯನ್ನು ಕಂಡಿತು.

ಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ,ಅಕ್ಷರದವ್ವ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ.

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ತುಮಕೂರು, ತಾಲೂಕು ಘಟಕ ತುರುವೇಕೆರೆ ವತಿಯಿಂದ ದಿನಾಂಕ 28.01.2023ರ ಮದ್ಯಾಹ್ನ 12.30 ಕ್ಕೆ ಕನ್ನಡ ಭವನ, ತುರುವೇಕೆರೆ ಇಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ, ಅಕ್ಷರದವ್ವ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಅಧ್ಯಕ್ಷರಾಗಿ ಶ್ರೀಮತಿ ಎಂ. ಟಿ ಭವ್ಯ ಮೇಡಂರವರ ಅಧ್ಯಕ್ಷತೆಯಲ್ಲಿ ಮತ್ತು ಎಲ್ಲ ಪದಾಧಿಕಾರಿಗಳ ಸಹಕಾರದಲ್ಲಿ ಬಹಳ ಅದ್ದೂರಿಯಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪ್ರಸ್ತುತ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಪಿ.ಎಸ್ ಅನುಸೂಯಾದೇವಿ ರವರು, ತುರುವೇಕೆರೆ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಮತಿ ಜೆ.ಎಚ್ ವೀಣಾ ಮೇಡಂ, ಜಿ.ಹೆಚ್. ಎಸ್ ದೊಡ್ಡಗೊರಘಟ್ಟದ ಮುಖ್ಯ ಶಿಕ್ಷಕರಾದ ಶ್ರೀಮತಿ ಸವಿತ ಮೇಡಂ,ಜಿ. ಹೆಚ್. ಎಸ್. ಹುಲಿ ಕೆರೆಯಮುಖ್ಯ ಶಿಕ್ಷಕರಾದ ಇಂದ್ರಾಣಿ ಮೇಡಂ, ಕಾರ್ಯಕ್ರಮದ ಉಪನ್ಯಾಸಕರಾಗಿ ಸ್ವಾಮಿ ವಿವೇಕಾನಂದ ಕಾಲೇಜಿನ ಶ್ರೀಮತಿ ರೂಪಶ್ರೀ ಮೇಡಂ, ತುಮಕೂರು ಜಿಲ್ಲಾ ಕಾರ್ಯದರ್ಶಿಗಳಾದ ಟಿ. ಎನ್ ಪ್ರವೀಣ ಕುಮಾರಿ ಮೇಡಂ, ಕುಣಿಗಲ್ ತಾಲೂಕಿನ pst ಮುಖ್ಯಸ್ತರಾದ ಶ್ರೀಮತಿ ಡಿ.ಜಿ ಗಂಗಮ್ಮ ಮೇಡಂ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಎಸ್ ವಾಣಿ ಮೇಡಂ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ,ಮುಂದೆಯು ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಮೊದಲಿಗೆ ಹೋಬಳಿವಾರು ಆಯ್ದ ಶಿಕ್ಷಕಿಯರುಗಳಿಗೆ “ಅಕ್ಷರದವ್ವ ” ಪ್ರಶಸ್ತಿ ಪ್ರಧಾನ ಮಾಡಲಾಯ್ತು.

ತದನಂತರದಲ್ಲಿ ಉಪನ್ಯಾಸಕರು ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಮತ್ತು ಮಹಿಳಾ ಸಬಲೀಕರಣಕ್ಕೆ ಒಂದಷ್ಟು ನಿದರ್ಶನಗಳನ್ನು ನೀಡಿ ಉಪನ್ಯಾಸ ನೀಡಿದರು. ತದ ನಂತರದಲ್ಲಿ ನಿವೃತ್ತ ಶಿಕ್ಷಕಿಯರುಗಳಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಮರ್ಪಣೆ ಕಾರ್ಯಕ್ರಮವು ನೆರವೇರಿತು.ಒಟ್ಟಾರೆ ತುರುವೇಕೆರೆ ತಾಲೂಕಿನ ಈವಿಶೇಷ ಕಾರ್ಯಕ್ರಮವು ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಮಾದರಿಯಾಗಿದ್ದು ಕಾರ್ಯಕ್ರಮವು ಎಲ್ಲರ ಮನಸೊರೆ ಗೊಂಡು KPS ದಂಡಿನಶಿವರದ ಮುಖ್ಯ ಶಿಕ್ಷಕಿಯರಾದ ಶ್ರೀಮತಿ M.Kಸುಶೀಲ ಮೇಡಂ ರವರು ಜಿಲ್ಲಾ ಅಧ್ಯಕ್ಷರ ಮಾತುಗಳಿಗೆ ಪ್ರಭಾವಿತರಾಗಿ ಸಾವಿತ್ರಿಬಾಯಿ ಫುಲೆ ಸಂಘ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಆರ್ಥಿಕ ಕೊರತೆಯನ್ನು ಗಮನಿಸಿ 10,000₹ ಗಳ ಕಿರುಕಾಣಿಕೆಯನ್ನು ಸೋಮವಾರ ಕೊಡುವುದಾಗಿ ತಿಳಿಸಿದರ ಮೂಲಕ ಅತ್ಯದ್ಭುತ ಯಶಸ್ವಿಯನ್ನು ಕಂಡಿತು. ಇಂತಹ ಅತ್ಯದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದ ತುರುವೇಕೆರೆ ತಾಲೂಕಿನ ಅಧ್ಯಕ್ಷರು &ಎಲ್ಲ ಪದಾಧಿಕಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳು.

ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಅವರ 193 ನೇ ಜಯಂತಿ ಆಚರಣೆ ಮತ್ತು ಸಾಧಕರಿಗೆ ಸನ್ಮಾನ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ). ರಾಜ್ಯ ಘಟಕ – ಧಾರವಾಡ, ಜಿಲ್ಲಾ ಘಟಕ – ತುಮಕೂರು, ತಾಲ್ಲೂಕು ಘಟಕ – ಗುಬ್ಬಿ..

ಗುಬ್ಬಿ: ದಿನಾಂಕ 26 ಜನವರಿ 2023ರ ಗುರುವಾರದಂದು ಗುಬ್ಬಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಭಾರತದ ಮೊದಲ ಶಿಕ್ಷಕಿ, ಕ್ರಾಂತಿಜ್ಯೋತಿ, ಅಕ್ಷರದವ್ವ, ಮಾತೆ ಸಾವಿತ್ರಿಬಾಯಿ ಫುಲೆ ಅವರ 193ನೇ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗುಬ್ಬಿ ಶಾಖೆಯ ವ್ಯವಸ್ಥಾಪಕರು, ಒತ್ತಡದ ಕೆಲಸದ ನಡುವೆಯೂ ಸದಾ ಹಸನ್ಮುಖಿಗಳಾಗಿ ಸಾರ್ವಜನಿಕರ ಸೇವೆ ಮಾಡುತ್ತಿರುವ ಶ್ರೀಮತಿ ಸುಮಾ ಮೇಡಂ ರವರನ್ನು ಮತ್ತು ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಶ್ರೀಮತಿ ಯಶೋದಾ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಸುಮಾ ಮೇಡಂ ಅವರು ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು ಮತ್ತು ಸದಾ ಸಂಘದ ಜೊತೆಗಿರುವುದಾಗಿ ತಿಳಿಸಿದರು.
ಗುಬ್ಬಿ ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಎಸ್ ವಿ ಅವರು ಪ್ರಾಸ್ತಾವಿಕ ನುಡಿಗಳಲ್ಲಿ ಮಾತೆಯ ಬಗ್ಗೆ, ಅವರ ಆದರ್ಶಗಳ ಬಗ್ಗೆ ಮತ್ತು ರಾಜ್ಯ ಘಟಕ, ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಅನಿತ.ವಿ.ಎಸ್. ರವರು ಮಾತೆಯನ್ನು ಆರಾಧಿಸುವ,ಪೂಜಿಸುವ ಜೊತೆ ಜೊತೆಯಾಗಿ ನಾವೆಲ್ಲರು ಮಾತೆಯ ಅನುಯಾಯಿಗಳಾಗಬೇಕು ಅವರ ಆದರ್ಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗುಬ್ಬಿ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಕೋಶಾಧ್ಯಕ್ಷರು ಮತ್ತು ತಾಲ್ಲೂಕಿನ ಸಮಸ್ತ ಪದಾಧಿಕಾರಿಗಳು, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.

ಜೀರೋ ಟ್ರಾಫಿಕ್ ನಲ್ಲಿ ಕೊಂಡೊಯ್ದ ದೇಹದ ಅಂಗಾಂಗಳು- ಸಾವಿನಲ್ಲೂ ಉದಾರತೆ ಮೆರೆದ ಲೋಹಿತ್

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ
ತಾಲ್ಲೂಕು ಘಟಕ- ಪಿರಿಯಾಪಟ್ಟಣ

ಕಳೆದ ಎರಡು ದಿನಗಳ ಹಿಂದೆ ಆಕಸ್ಮಿಕ ರಸ್ತೆ ಅಪಘಾತದಲ್ಲಿ ಮೆದುಳಿಗೆ ಪೆಟ್ಟು ಬಿದ್ದು ನಿಷ್ಕ್ರಿಯವಾದ ಕಾರಣದಿಂದ ಮೃತಪಟ್ಟ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ‌ ಶ್ರೀಮತಿ ಗಾಯತ್ರಿ ಅವರ ಅಕ್ಕನ ಮಗನಾದ ಕುಮಾರ ಲೋಹಿತ (29) ರವರ ದೇಹದ ಅಂಗಾಂಗಗಳಾದ ಹೃದಯ,ಶ್ವಾಸಕೋಶ,ಲಿವರ್,ಕಿಡ್ನಿ, ಸ್ಪೈನಲ್ ಕಾರ್ಡ್ ದಾನ ಮಾಡಿಸುವ ಮೂಲಕ ನಾಡಿಗೇ ಮಾದರಿಯಾಗಿದ್ದಾರೆ.

ಜೀರೋ ಟ್ರಾಪಿಕ್ ಮೂಲಕ ಲೋಹಿತ್ ನ ಹೃದಯವನ್ನು ಚೆನ್ನೈಗೆ ಕೊಂಡೊಯ್ದರು

ಪಿರಿಯಾ ಪಟ್ಟಣ ತಾಲ್ಲೂಕಿನ ಚಿಟ್ಟೇನಹಳ್ಳಿ ಗ್ರಾಮದ ವಾಸಿಯಾಗಿದ್ದ ಮೃತರು ತಾಲ್ಲೂಕಿನ ಅಧ್ಯಕ್ಷರಾದ ಗಾಯತ್ರಿರವರ ಅಕ್ಕನಾದ ಶ್ರೀಮತಿ ಸುಮತಿ ರವರ ಪುತ್ರರಾಗಿದ್ದು, ತನ್ನ ಅಂಗಾಂಗಳ ದಾನದಿಂದ ಅಂಗ ಪಡೆಯುವವರ ಜೀವನಕ್ಕೆ ಬೆಳಕಾಗಿದ್ದಾರೆ.ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಅಂಗಾಂಗಗಳನ್ನು ಪಡೆದು ಕೊಳ್ಳುವ ಕಾರ್ಯ ನಡೆಯುತ್ತಲಿದ್ದು,ನಾಳೆ ಮೃತರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ..ಮರೆಯಲಾಗದ ಮಾಣಿಕ್ಯ ಲೋಹಿತ್ ರವರ ಆತ್ಮಕೆ ಚಿರಶಾಂತಿ ಸಿಗಲಿ.ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಆ ಭಗವಂತ ಕರುಣಿಸಲಿ ಎಂದು ತಾಲ್ಲೂಕಿನ ಬಂಧುಗಳು, ಮೈಸೂರು ಹಾಗೂ ಇತರೆ ಜಿಲ್ಲೆಗಳ ಬಂದು ಮಿತ್ರರು ಪ್ರಾರ್ಥಿಸಿದ್ದಾರೆ.

ಸಾವಿತ್ರಿಬಾಯಿ ಫುಲೆ ಚಲನಚಿತ್ರ ವೀಕ್ಷಣೆ-ಎಲ್ಲಡೆ ಪ್ರಶಂಸೆಯ ಮಾತು

ಶ್ರೀಮತಿ ಅರುಣಾ ಬಾಯಿ .ಅಧ್ಯಕ್ಷರು.
ಮಾನವಿ ತಾಲ್ಲೂಕು ,ರಾಯಚೂರು ಜಿಲ್ಲೆ..

ಕಾದಂಬರಿ ಆಧಾರಿತ ಸಿನೆಮಾ ಇದಾಗಿದ್ದು,ಮಾತೆ ಸಾವಿತ್ರಿ ಅನಾಚಾರ ಮೌಡ್ಯವನ್ನು ಚೆನ್ನಾಗಿ ಪ್ರಶ್ನೆ ಮಾಡಿದ್ದಾರೆ, ಸತಿಸಹಗಮನ ಪದ್ದತಿ, ಬಾಲ್ಯ ವಿವಾಹ , ಶಿಕ್ಷಣ ದಿಂದ ಹಳೆ ಕಂದಾಚಾರಕ್ಕೆ ಸವಾಲು ಎತ್ತಿದ್ದಾರೆ, ಸಮಾನತೆ , ಸ್ವಾತಂತ್ರ್ಯ,ಬಗ್ಗೆ ತಿಳಿಯಬೇಕು ಅಂದರೆ ಶಿಕ್ಷಣ ಬೇಕು ಎನ್ನುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಮುಖ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಸಮಾಜದಲ್ಲಿ ಇರುವ ಅನಿಷ್ಟ ಪದ್ಧತಿ ಗಳನ್ನ ಪ್ರಶ್ನೆ ಮಾಡಿದ್ದಾರೆ. ಲಿಂಗ,ಜಾತಿಗಿಂತ ಎಲ್ಲರೂ ಸಮಾನರು ಎಂಬುದನ್ನು ಮನಗಂಡು ಸತ್ಯವನ್ನು ಪ್ರತಿಪಾದಿಸಿದ್ದಾರೆ, ವಿತಂಡವಾದ ಎಂದವರಿಗೆ ಲಕ್ಷ್ಯ ಕೊಡದೆ ಹೆಣ್ಣುಮಕ್ಕಳ ಮೇಲೆ ಆಗುವ ಅತ್ಯಾಚಾರ ,ಶೋಷಣೆ ,ಅನ್ಯಾಯ ವಿರುದ್ಧ ಸಿಡಿದೆದ್ದ ಸಾವಿತ್ರಿ ಬಾಯಿ, ಶೋಷಣೆ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ಶಿಕ್ಷಣ ದಿಂದಲೇ ಧೈರ್ಯ ತುಂಬಿದ್ದಾರೆ. ಹೆಣ್ಣು ಒಂದು ಭೋಗದ ವಸ್ತು ಅಲ್ಲಾ ಮಹಿಳೆಯರು ಜಾಗೃರಾಗಿರಬೇಕು ಸಮಾಜದ ಅನಿಷ್ಟ ಪದ್ಧತಿ ವಿರುದ್ಧ ಧ್ವನಿ ಎತ್ತಬೇಕು ಎಂದು ಸಿನೆಮಾದಲ್ಲಿ ಸ್ಪಷ್ಟವಾಗಿ ಮೂಡಿ ಬಂದಿದೆ.
ಸಮಾಜದ ಸುಧಾರಣೆ ಆಗಬೇಕಾದರೆ ಹೊಸ ಕ್ರಾಂತಿ ಜ್ವಾಲೆ ಕಿಡಿ ಹಚ್ಚಿದವರು ಸಾವಿತ್ರಿ.. ಅಜ್ಞಾನದಿಂದ ಜ್ಞಾನದ ಕಡೆಗೆ ಕೊoಡಯ್ಯುವಲ್ಲಿ ಜೀವನದ ರಹಸ್ಯ ಇದೆ. ಮನುಷ್ಯರು ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದ್ದಾರೆ..ಮಹಿಳೆಯರ ಕೇಶಮುಂಡನೆಗೂ ಕೊನೆ ಹಾಡಿದ್ದಾರೆ.. ಸಿನೆಮಾದಲ್ಲಿ ಎಲ್ಲಾ ನಟರು ತಮ್ಮ ಪಾತ್ರಗಳಿಗೆ ನಿಜವಾಗಿಯೂ ಜೀವ ತುಂಬಿದ್ದಾರೆ.. ಜನ ಸೇವಾ ಜನಾರ್ಧನ ಸೇವಾ ಎಂದು ಹೇಳಿ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇರುವ ಅಜ್ಞಾನ ಹೋಗಲಾಡಿಸಿ ಜ್ಞಾನದ ಜ್ಯೋತಿ ಹಚ್ಚಿದ್ದಾರೆ.. ಇಂಥಾ ಸಿನಿಮಾ ಮಾಡಿದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಅನಂತ ದನ್ಯವಾದಗಳು.

ಡಾ. ರಾಧಾ ಕೆ. ಎಂ. ತಿಪಟೂರು

ಸಾವಿತ್ರಿಬಾಯಿ ಫುಲೆ ಚಲನಚಿತ್ರವು ಅತ್ಯುತ್ತಮ ಚಲನಚಿತ್ರವಾಗಿದ್ದು ಸಾವಿತ್ರಿಬಾಯಿ ಫುಲೆಯವರು ತಮ್ಮ ಜೀವನದಲ್ಲಿ ಪಟ್ಟಂತಹ ಕಷ್ಟ, ಅಕ್ಷರ ಅಭ್ಯಾಸವನ್ನು ಕಲಿತು ಅವರು ಶಾಲೆಯನ್ನು ಪ್ರಾರಂಭಿಸಿ ಹೆಣ್ಣುಮಕ್ಕಳಿಗೆ ದಾರಿದೀಪವಾದಂತಹ ರೀತಿಯನ್ನು ಅತ್ಯಂತ ಮನಮುಟ್ಟುವಂತೆ ಚಿತ್ರಿಸಲಾಗಿದ್ದು ಇಂದಿನ ಎಲ್ಲಾ ಹೆಣ್ಣು ಮಕ್ಕಳಿಗೆ ಆಕೆ ಹೇಗೆ ಮಾದರಿಯದಳು ಎಂಬುದನ್ನು ಮನೋಹರವಾಗಿ ತಿಳಿಸಲಾಗಿದೆ. ಚಲನಚಿತ್ರ ನಿರ್ದೇಶಕರಿಗೆ ನಿರ್ಮಾಪಕರಿಗೆ ಹಾಗೂ ನಟನೆ ಮಾಡಿದ ಎಲ್ಲರಿಗೂ ಹೃತ್ಪೂರ್ವಕವಾದ ಧನ್ಯವಾದಗಳು

R.ಮುಕ್ತಾಮಣಿ. ಸಂಘಟನಾ ಕಾರ್ಯದರ್ಶಿ. ತಿಪಟೂರು ತಾಲೂಕು

ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಚಲನಚಿತ್ರ ಅತ್ಯುತ್ತಮ ಚಲನಚಿತ್ರವಾಗಿದ್ದು ಸಾವಿತ್ರಿಬಾಯಿ ಯವರು ಅಕ್ಷರ ಅಭ್ಯಾಸವನ್ನು ಕಲಿತು ಅವರು ಶಾಲೆಯನ್ನು ಪ್ರಾರಂಭಿಸಿ ಹೆಣ್ಣು ಮಕ್ಕಳಿಗೆ ಬೆಳಕಾಗಿ ಆಕೆ ಹೇಗೆ ಮಾದರಿಯಾದರು ಎಂಬುದನ್ನು ಮನಮುಟ್ಟುವಂತೆ ತಿಳಿಸಲಾಗಿದೆ. ಈ ಚಲನಚಿತ್ರವನ್ನು ಶಾಲಾ ಮಕ್ಕಳು ಸಹ ವೀಕ್ಷಿಸುವಂತೆ ಅವಕಾಶ ಒದಗಿ ಬರಲಿ.

Vijayalakshmi Teacher GHS SHIVANAGERE MADHUGIRI DISTRICT

I need to discussing about Savitri bai pule picture. It was excellent story. She met so much of risk in her life. But she didn’t think about it. Really she’s a good teacher and mother also.

ಭವ್ಯ ಎಂಟಿ,ಅಧ್ಯಕ್ಷರು
ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ. ತುರುವೇಕೆರೆ ತಾಲೂಕು ಘಟಕ, ತುಮಕೂರು ಜಿಲ್ಲೆ

ಸಾವಿತ್ರಿಬಾಯಿ ಪುಲೆ ರವರ ಕನ್ನಡ ಚಲನಚಿತ್ರ ಒಂದು ಅಭೂತಪೂರ್ವವಾದ ಚಲನಚಿತ್ರವಾಗಿದೆ, ಅದನ್ನ ತೆರೆಯ ಮೇಲೆ ತಂದಂತಹ ನಿರ್ದೇಶಕರಿಗೆ ಅನಂತ ಅನಂತ ಧನ್ಯವಾದಗಳು ಹಾಗು ಕಾದಂಬರಿ ಕಾರರಿಗೆ ಹಾಗೂ ತಾರಾ ಗಣಕ್ಕೆ ಕೋಟಿ ಕೋಟಿ ನಮಸ್ಕಾರಗಳು, ಅಂದಿನ ಕಾಲದ ಹೆಣ್ಣಿನ ಸುಖ ದುಃಖವನ್ನು ಎಳೆ ಎಳೆಯಾಗಿ ಚಿತ್ರಿಸಿರುವ ನಮ್ಮ ನಿರ್ದೇಶಕರಿಗೆ, ಚಿತ್ರತಂಡಕ್ಕೆ ಮತ್ತು ಪ್ರೊಡ್ಯೂಸರ್ ಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು, ಇಂತಹ ಒಂದು ಚಲನಚಿತ್ರವನ್ನು ತೆರೆಯ ಮೇಲೆ ತಂದಿರುವುದೇ ಒಂದು ದೊಡ್ಡ ಮತ್ತು ಗೌರವ ಪೂರ್ವಕವಾದ ವಿಷಯವಾಗಿದೆ. ಪ್ರತಿಯೊಂದು ಸೂಕ್ಷ್ಮ ಸಂಗತಿಗಳನ್ನು ತೆರೆಯ ಮೇಲೆ ತಂದಿರುವುದು, ಅಸಹಾಯಕ ಸಂದರ್ಭದಲ್ಲಿ ಸಾವಿತ್ರಿಯ ದಿಟ್ಟ ನಡೆ ಜ್ಯೋತಿಬಾ ರವರ ಸಹಕಾರ ಸಾಂಗತ್ಯ, ಗಂಡ ಹೆಂಡಿರ ಪವಿತ್ರ ಬಂಧನ, ಹೆಣ್ಣಿನ ಶೋಷಣೆ ಮೂಢನಂಬಿಕೆ, ಅವೆಲ್ಲವನ್ನು ತೊಡೆದು ಹಾಕುವಲ್ಲಿ ಸಾವಿತ್ರಿ ಮತ್ತು ಜ್ಯೋತಿಬಾ ರವರ ಗಟ್ಟಿ ನಿರ್ಧಾರ, ಕಥಾ ಎಣಿಕೆಯ ಸರಳತೆ, ಎಲ್ಲವೂ ತುಂಬಾ ಸುಂದರವಾಗಿ ಮೂಡಿ ಬಂದಿದೆ.

ಸ್ವಪ್ನ ಆರ್. ಎ. ಸಹ ಶಿಕ್ಷಕಿ
ಸ.ಕಿ. ಪ್ರಾ.ಶಾಲೆ ದಾಸಣ್ಣನಹಟ್ಟಿ
ಹಿರಿಯೂರು ತಾಲ್ಲೂಕು,ಚಿತ್ರದುರ್ಗ ಜಿಲ್ಲೆ

ಆಗಿನ ಕಾಲದಲ್ಲಿ ಶಿಕ್ಷಣ ಪಡೆಯುವ ಕಷ್ಟಗಳು ಹೇಗೆ ಎಂಬುದನ್ನು ಅದ್ರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ,ಸಮಾಜದ ಉದ್ದಾರಕ್ಕೆ ತಮ್ಮ ಪ್ರಾಣವನ್ನೇ ಅರ್ಪಣೆ ಮಾಡಿದ ಮಹಾತಾಯಿಗೆ ಶರಣು ಶರಣು ಅದೇ ರೀತಿ ಇದನ್ನು ಚಿತ್ರಮಂದಿರದಲ್ಲಿ ನೋಡಲು ಅವಕಾಶ ನೀಡಿದ ಹಾಗೂ ಚಿತ್ರವನ್ನು ಮಾಡಲು ವಿಶಾಲ ಮನಸ್ಸು ಮಾಡಿದ ನಿರ್ದೇಶಕರಿಗೂ, ನಿರ್ಮಾಪಕರಿಗೆ,ಚಿತ್ರಕ್ಕೆ ಕಾದಂಬರಿ ರೂಪುರೇಷೆ ಕೊಟ್ಟ ಸರಜು ಕಾಟ್ಕರ್ ಅವರಿಗೆ ಅನಂತ ಧನ್ಯವಾದಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಮಯದ ಚಿತ್ರ ಬರಲಿ ಎಂದು ನಿರೀಕ್ಷಿಸುವೆ.