ಶಿಕ್ಷಕರ ದಿನಾಚರಣೆ – ಎರಡು ಭಾವಚಿತ್ರಗಳಿಗೂ ಸಮಾನ ಗೌರವ ನೀಡಿ ಪುಷ್ಪಾರ್ಪಣೆ ಮಾಡಿದ ಮುಖ್ಯಮಂತ್ರಿಗಳು-ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಕಿಯರ ಸಂಘ

ಸನ್ಮಾನ್ಯ ಗೌರವಯುತ ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಶಿಕ್ಷಣ ಸಚಿವರು ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಯಂದು ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದೊಂದಿಗೆ ಮಾತೇ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರವನ್ನೂ ಇರಿಸಿ,ಎರಡೂ ಭಾವಚಿತ್ರಗಳಿಗೂ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ,ಇದು ಶಿಕ್ಷಕ ಶಿಕ್ಷಕಿಯರ ಮೇಲಿರುವ ಅವರ ಅಭಿಮಾನವನ್ನು ತೋರಿಸುತ್ತದೆ,ಸಮಸ್ತ ಕರ್ನಾಟಕದ ಮಹಿಳಾ ಶಿಕ್ಷಕಿಯರ ಪರವಾಗಿ ಘನ ಸರ್ಕಾರದ ಮಾನ್ಯಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಗೌರವಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತದೆ.

ರಾಜ್ಯಾದ್ಯಂತ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಇದೇ ರೀತಿಯಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ದೊಂದಿಗೆ ಮಾತೇ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರವನ್ನು ಸಹಾ ಇಟ್ಟು ಗೌರವ ಸಮರ್ಪಣೆ ಆಗಬೇಕು. ಪುರುಷ ಪ್ರಧಾನವಿದ್ದ ಅಂತಹ ಕಾಲದಲ್ಲಿ ,ಶಿಕ್ಷಣಕ್ರಾಂತಿಯನ್ನೇ ಮೊಳಗಿಸಿ ಭಾರತದ ಪ್ರಥಮ ಶಿಕ್ಷಕಿ ಬಿರುದು ಪಡೆದ ಅಕ್ಷರಮಾತೆ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ರವರಿಗೆ ಯಾವುದೇ ಹಂತದ ಶೈಕ್ಷಣಿಕ ಕಾರ್ಯಕ್ರಮಗಳಲ್ಲೂ ಸಹಿತ ಅವರ ಭಾವಚಿತ್ರವಿಟ್ಟು ಪೂಜಿಸಿ ಗೌರವಿಸುವಂತ ಶಿಷ್ಟಾಚಾರ ಎಲ್ಲಾ ಶೈಕ್ಷಣಿಕ ದಿನಾಚರಣೆಯಲ್ಲಿ ಬರಬೇಕು
ಪ್ರತಿ ಶಾಲೆಯಲ್ಲಿಯೂ ಸಹಾ ಅವರ ಭಾವಚಿತ್ರ ಇರಬೇಕು
ಶಿಕ್ಷಕರ ದಿನಾಚರಣೆಯಂದು,ಡಾ ರಾಧಾಕೃಷ್ಣನ್ ರವರಿಗೆ ಗೌರವ ಸಲ್ಲುವಂತೆಯೇ ಮಾತೆ ಸಾವಿತ್ರಿಬಾಯಿ ಫುಲೆ ರವರಿಗೂ ಸಲ್ಲಬೇಕು ಇದರಿಂದ ಎಲ್ಲರೂ ತಮ್ಮ ಶಿಕ್ಷಕ ವೃತ್ತಿಯಲ್ಲಿ ಸಾರ್ಥಕತೆ ಪಡೆಯಬಹುದಾಗಿದೆ,ಇದು ನಮ್ಮೆಲ್ಲರ ಆಶಯವೂ ಆಗಿದೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆ ತಿಳಿಸಿದೆ.

ಡಾ.ಮುಳ್ಳೂರ ರವರ ಎರಡು ದಿನಗಳ ತುಮಕೂರು ಜಿಲ್ಲಾ ಪ್ರವಾಸ ಸಂಪೂರ್ಣ ಯಶಸ್ವಿ

ತುಮಕೂರು ಆ.22 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್ ಮುಳ್ಳೂರ ರವರ ಎರಡು ದಿನಗಳ ತುಮಕೂರು ಜಿಲ್ಲಾ ಪ್ರವಾಸ ಸಂಪೂರ್ಣ ಯಶಸ್ವಿಯಾಗಿದೆ.

ಹೌದು ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲಾ ಘಟಕಗಳು ಜಂಟಿಯಾಗಿ ಅಯೋಜನೆ ಮಾಡಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಭೆಗೆ ಧಾರವಾಡ ದಿಂದ ಶನಿವಾರ ಬೆಳಿಗ್ಗೆ ತುಮಕೂರಿಗೆ ಬಂದಿಳಿದಿದ್ದ ಡಾ.ಲತಾ.ಎಸ್.ಮುಳ್ಳೂರ ರವರು ನೇರವಾಗಿ ಶ್ರೀ ಕ್ಷೇತ್ರ ಸಿದ್ದಗಂಗಾ ಮಠಕ್ಕೆ ಬೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ನಂತರದಲ್ಲಿ ಶ್ರೀ ಮಠಕ್ಕೆ ಆಗಮಿಸಿದ್ದ ಕೃಷಿ ಹಾಗೂ ರೈತರ ಕಲ್ಯಾಣ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರನ್ನು ಬೇಟಿ ಮಾಡಿ ಗೌರವಿಸಿ ಸಂಘಟನೆಗೆ ಸಹಕಾರ,ಬೆಂಬಲ ಕುರಿತಂತೆ ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಶ್ರೀ ಮಠಕ್ಕೆ ಬಂದಿದ್ದ ತುಮಕೂರಿನ ಮಾಜಿ ಮಂತ್ರಿಗಳಾದ ಶ್ರೀ ಶಿವಣ್ಣರವರನ್ನೂ ಸಹಾ ಗೌರವಿಸಿದರು ಹಾಗೆಯೇ ಹೆಸರಾಂತ ಚಲನಚಿತ್ರ ನಟರು,ಕನ್ನಡಪರ ಹೋರಾಟಗಾರರಾದ ಮುಖ್ಯಮಂತ್ರಿ ಚಂದ್ರುರವರನ್ನು ಗೌರವಿಸಿ, ಸಂಘಟನೆ ಗುರಿ ಉದ್ದೇಶ ಕುರಿತಂತೆ ಚರ್ಚಿಸಿದರು. ತದ ನಂತರ ನೇರವಾಗಿ ತುಮಕೂರು ಪ್ರವಾಸಿ ಮಂದಿರಕ್ಕೆ ತೆರಳಿ ಮಾದ್ಯಮರೊಂದಿಗೆ ಪತ್ರಿಕಾ ಗೋಷ್ಟಿ ನಡೆಸಿದರು.


ಮದ್ಯಾಹ್ನ ಎರಡಕ್ಕೆ ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಎರಡೂ ಜಿಲ್ಲೆಗಳ ಎಲ್ಲಾ ತಾಲ್ಲೂಕು ಪದಾಧಿಕಾರಿಗಳೊಂದಿಗೆ ಸಂಘಟನೆ ಕುರಿತಂತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಶಿಕ್ಷಕಿಯರು ಒಟ್ಟುಗೂಡಿ ಸಂಘಟನೆಯನ್ನು ಬಲಪಡಿಸಬೇಕು, ಎದುರಾಗುವ ಯಾವುದೇ ಸಮಸ್ಯೆಗಳನ್ನು ದೈರ್ಯದಿಂದ ಎದುರಿಸಬೇಕು ಎಂದು ಭಾಗವಹಿಸಿದ್ದ ಎಲ್ಲರಿಗೂ ದೈರ್ಯತುಂಬಿ ಆತ್ಮವಿಶ್ವಾಸ ಮೂಡಿಸಿದರು.


ಸಭೆಯು ಸಂಪೂರ್ಣವಾಗಿ ಯಶಸ್ವಿಯಾಯಿತು.
ಎರಡನೇ ದಿನ ಭಾನುವಾರ ಬೆಳಿಗ್ಗೆ ಯೇ ತಿಪಟೂರಿಗೆ ಪ್ರಯಾಣ ಬೆಳಸಿ ಮಾನ್ಯ ಶಿಕ್ಷಣ ಮಂತ್ರಿಗಳಾದ ಶ್ರೀ ಬಿ.ಸಿ.ನಾಗೇಶ್ ರವರನ್ನು ಬೇಟಿ ಮಾಡಿ ಗೌರವಿಸಿ ಸನ್ಮಾನಿಸಿದರು. ತಿಪಟೂರು ತಾಲ್ಲೂಕು ಪದಾಧಿಕಾರಿಗಳೊಂದಿಗೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಬೇಟಿ ಮಾಡಿ,ಮಹಿಳಾ ಮೀಸಲಾತಿ ಬೇಡಿಕೆ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು. ಮದ್ಯಾಹ್ನ ತುಮಕೂರಿಗೆ ಮರಳಿ ಇತ್ತೀಚೆಗೆ ನಡೆದಿದ್ದ ಕರೀಕೆರೆ ಶಾಲೆಯ ದುರ್ಘಟನೆ ಕುರಿತಂತೆ ವಿಷಾದ ವ್ಯಕ್ತಪಡಿಸಿ ಅಲ್ಲಿನ ಶಾಲೆಯ ಶಿಕ್ಷಕಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಎರಡು ದಿನಗಳ ತುಮಕೂರು ಪ್ರವಾಸದಲ್ಲಿ ತುಮಕೂರು ಜಿಲ್ಲಾಧ್ಯಕ್ಷರಾದ ಅನುಸೂಯದೇವಿ ಹಾಗೂ ಮಧುಗಿರಿ ಜಿಲ್ಲಾಧ್ಯಕ್ಷರಾದ ರಾಧಮ್ಮ ಹಾಗೂ ಇತರೆ ಪದಾಧಿಕಾರಿಗಳು ಪ್ರತೀ ಸಂದರ್ಭದಲ್ಲೂ ನನ್ನ ಜೊತೆಯಲ್ಲಿದ್ದು ಪ್ರವಾಸದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ ಎಂದು ಡಾ.ಮುಳ್ಳೂರ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಇದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎರಡೂ ಜಿಲ್ಲೆಗಳ ಎಲ್ಲಾ ತಾಲ್ಲೂಕು ಪದಾಧಿಕಾರಿಗಳಿಗೂ,ಆತ್ಮೀಯ ಶಿಕ್ಷಕ ಶಿಕ್ಷಕಿಯರಿಗೂ ಧನ್ಯವಾದಗಳನ್ನು ಅರ್ಪಿಸಿ ಭಾನುವಾರ ರಾತ್ರಿ ಧಾರವಾಡಕ್ಕೆ ಪ್ರಯಾಣ ಬೆಳಿಸಿದರು.

ಶಿಕ್ಷಕಿಯರು ಬರುತ್ತಿದ್ದಾರೆ.ದಾರಿ ಬಿಡಿ.ಗೌರವ ಕೊಡಿ ಎಂದು ಸಂದೇಶ ನೀಡಿದ ವಿಶ್ರಾಂತ ಕುಲಪತಿಗಳು ಡಾ.ಮಲ್ಲಿಕಾ ಘಂಟಿರವರು


ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ವತಿಯಿಂದ

ಆಯೋಜನೆಯಾದ ರಾಜ್ಯಮಟ್ಟದ ವರ್ಚುವಲ್ ವೇಬಿನಾರ ಕಾರ್ಯಕ್ರಮ,
ದಿನಾಂಕ 14 /08/ 2021 ಶನಿವಾರ ಸಂಜೆ. 4 ಗಂಟೆಗೆ ಹೆಸರಾಂತ ಮಹಿಳಾಪರ ಹೋರಾಟಗಾರರು, ಸ್ತ್ರೀವಾದಿ ಚಿಂತಕರು .ರಾಜ್ಯಕ್ಕೆ ಚುರಪರಿಚಿತರು ಹಾಗೂ ಹಿರಿಯ ಸಾಹಿತಿಗಳು ಆದಂತಹ ಡಾ. ಮಲ್ಲಿಕಾ ಘಂಟಿ ಮೇಡಂ .ವಿಶ್ರಾಂತ ಉಪಕುಲಪತಿಗಳು ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇವರಿಂದ ಮಹಿಳಾ ಸ್ವಾತಂತ್ರ್ಯ ಸಮಾನತೆ ಮತ್ತು ಮಹಿಳಾ ಮೀಸಲಾತಿ ಎಂಬ ವಿಷಯದ ಕುರಿತು ವೆಬಿನಾರ್ ಹಾಗೂ ಸಂವಾದ ಕಾರ್ಯಕ್ರಮ ಅತ್ತ್ಯುತ್ತಮವಾಗಿ ಜರುಗಿತು.
ಈ ವೆಬಿನಾರ ಕಾರ್ಯಕ್ರಮವನ್ನು ಶ್ರೀಮತಿ ರಕ್ಷಾ ಮೇಡಮ್ ಅವರು ಗಣೇಶನ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು.
ಡಾ. ಲತಾ .ಎಸ್. ಮುಳ್ಳೂರ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಭೆಯಲ್ಲಿ ಹಾಜರಿದ್ದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಅತಿಥಿ ಮಹೋದಯರಿಗೆ ಸ್ವಾಗತ ಕೋರಿದರು.
ಶ್ರೀಮತಿ ಜ್ಯೋತಿ ಎಚ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ವೆನಿನಾರ್ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶ್ರೀಮತಿ ಸುಜಾತ ಮೇಡಂ ರಾಜ್ಯ ತಾಂತ್ರಿಕ ವಿಭಾಗದ ಸದಸ್ಯರು ಕಾರ್ಯಕ್ರಮದ ಕೇಂದ್ರಬಿಂದುವಾದ ಡಾಕ್ಟರ್ ಮಲ್ಲಿಕಾಘಂಟಿ ಅವರ ಪರಿಚಯ ಮಾಡಿಕೊಟ್ಟರು. ಅವರು ಮಾಡಿದಂತಹ ಪರಿಚಯ ಎಲ್ಲರನ್ನೂ ಭಾವುಕರನ್ನಾಗಿ ಮಾಡಿತು.
ಡಾ.ಮಲ್ಲಿಕಾ ಘಂಟಿ ಮೇಡಮ್ ಮಹಿಳಾ ಮೀಸಲಾತಿ ಬಗ್ಗೆ ಮಹಿಳಾ ಸಮಾನತೆಗಳ ಬಗ್ಗೆ ಅತ್ಯಂತ ಸುಧೀರ್ಘವಾಗಿ ತಮ್ಮ ಅನುಭವಗಳ ಆಧಾರದ ಮೇಲೆ ತಾವು ಎದುರಿಸಿದಂತಹ ಸಮಸ್ಯೆಗಳನ್ನು ಹಾಗೂ ಅದನ್ನು ಪರಿಹರಿಸಿದ ರೀತಿಗಳನ್ನು ವಿವರವಾಗಿ ಹೇಳಿದರು.
ಮಾತೇ ಸಾವಿತ್ರಿಬಾಯಿ ಪುಲೆಯವರ ಕಾಲದಿಂದ ಹಿಡಿದು ಈಗಿನವರೆಗೂ ಅವರು ಅನುಭವಿಸಿದಂತಹ ಸಮಸ್ಯೆಗಳನ್ನು ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲ ಮಹಿಳೆಯರು ಎದುರಿಸುತ್ತಿದ್ದಾರೆ ಎನ್ನುವುದನ್ನು ವ್ಯಕ್ತಪಡಿಸಿದರು. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎಲ್ಲಿ ಮಹಿಳೆಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂಬ ಸಂಸ್ಕೃತ ಶ್ಲೋಕ ಅದರ ಬದಲಾಗಿ ಇವತ್ತು ಎಲ್ಲಿ ಹೆಣ್ಣುಮಕ್ಕಳು ಇರುತ್ತಾರಲ್ಲ ಅಲ್ಲಿ ನೋವುಗಳು ಕಷ್ಟಗಳು ಇರುತ್ತವೆ ಎನ್ನುವ ಮಟ್ಟಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ಬಂದೊದಗಿದೆ ಎನ್ನುವುದರಲ್ಲಿ ಸಂಶಯವಿಲ್ಲ ಎನ್ನುವುದನ್ನು ಹೇಳಿದರು.


ಬೌದ್ಧ ಜೈನ ಧರ್ಮದ ಕಾಲದಿಂದಲೂ ಮಹಿಳೆಯರಿಗೆ ಸಂಘ ಪ್ರವೇಶ ಮಾಡುವ ಒಂದು ಸ್ವಾತಂತ್ರ್ಯ ಇರಲಿಲ್ಲ ಮಹಿಳೆಯರು ಸಂಘ ಪ್ರವೇಶ ಮಾಡಿದರೆ ಸಂಘದ ಆಯಸ್ಸು ಕಡಿಮೆಯಾಗುತ್ತದೆ ಎನ್ನುವ ಒಂದು ಭಾವನೆಯನ್ನು ಪುರುಷರು ಹೊಂದಿದ್ದರು. ಹೀಗಾಗಿ ಕೌಟುಂಬಿಕವಾಗಿ ಸಾಮಾಜಿಕವಾಗಿ ಸಮಾನತೆಯನ್ನು ಕಾಣಲಿಕ್ಕೆ ಆಗುತ್ತಾ ಇರಲಿಲ್ಲ .ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತನ್ನು ಏಕೆ ಹೇಳಿದರು ಜಗತ್ತನ್ನು ತೆರೆದಂತೆ ಮಾತು ಬರಬಹುದಾಗಿತ್ತಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮಹಿಳೆಯರಿಗೆ ದೌರ್ಜನ್ಯ ಅವರಿಗೆ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಅವಕಾಶ ಕುಟುಂಬದಿಂದಲೇ ಶುರುವಾಗುತ್ತೆ .ಲಿಂಗ ತಾರತಮ್ಯ ಎನ್ನುವುದು ಕೂಡ ನಮ್ಮ ಮನೆಯ ಕುಟುಂಬದ ಪರಿಸರದಿಂದಲೇ ಆರಂಭವಾಗುತ್ತೆ ಈ ಒಂದು ಭಾವನೆಯನ್ನು ಎಲ್ಲರೂ ಕಿತ್ತೊಗೆದಾಗ ಸ್ತ್ರೀ ಸಮಾನತೆಯನ್ನು ತಕ್ಕಮಟ್ಟಿಗೆ ಸಾಧಿಸಬಹುದು. ಹಾಗೆಯೇ ಜ್ಞಾನವು ಸಮಾನತೆಯನ್ನು ಕೊಡುತ್ತದೆ ಮತ್ತು ಅಕ್ಷರವು ಸ್ವಾತಂತ್ರ್ಯವನ್ನು ಒದಗಿಸುತ್ತದೆ .ಹೀಗಾಗಿ ಸಮಾನತೆ ಮತ್ತು ಸ್ವಾತಂತ್ರ್ಯ ಅವುಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಇವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಮೀಸಲಾತಿಯನ್ನುವುದು ಒಂದು ಹಂತದಲ್ಲಿ ಸಾಮಾಜಿಕವಾಗಿ ಸಾರ್ವಜನಿಕವಾಗಿ ಮುಂದುವರಿಯಲು ಒಂದು ಊರುಗೋಲಾಗಿದೆ. ಎನ್ನುವ ಮಾತನ್ನು ಸೂಕ್ಷ್ಮವಾಗಿ ಹೇಳಿದರು. ಇದನ್ನೆಲ್ಲಾ ನೋಡಿದಾಗ ಮಹಿಳೆಯರಿಗೆ ಸ್ವಾತಂತ್ರ್ಯ ಬಂದಿದೆ ಎಂದರೆ ಅದು ಒಂದು ಆದರ್ಶ ಮಾತ್ರ ಆದರೆ ಅದು ವಾಸ್ತವದಲ್ಲಿ ಸ್ವಾತಂತ್ರ್ಯ ಅಲ್ಲ ಎನ್ನುವುದನ್ನು ವ್ಯಕ್ತಪಡಿಸಿದರು.
ಮೆಡಮ ಅವರ ಸುಧೀರ್ಘ 3 ತಾಸು ವೆಬಿನಾರ ನಂತರ ಸಂವಾದ ಕಾರ್ಯಕ್ರಮ ನಡೆಯಿತು ಶಿಕ್ಷಕಿಯರು ಕೇಳಿದಂತಹ ಪ್ರಶ್ನೆಗಳಿಗೆ ಸಹನೆಯಿಂದ ತಾಳ್ಮೆಯಿಂದ ಸಮರ್ಪಕವಾದ ಉತ್ತರ ಕೊಟ್ಟರು. ತಮ್ಮ ವೃತ್ತಿ ಜೀವನದಲ್ಲಿ ತಾವು ಅನುಭವಿಸಿದಂತಹ ವಿಚಾರಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ಇಲ್ಲಿ ಸಣ್ಣ ದೊಡ್ಡದು ಯಾವುದು ಇಲ್ಲ. ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅದರ ಮೂಲಕ ನಮ್ಮ ಸಾಮರ್ಥ್ಯಗಳನ್ನು ತೋರ್ಪಡಿಸಬೇಕು ಎಂಬುದನ್ನು ವ್ಯಕ್ತಪಡಿಸಿದರು. ಸಂವಾದ ಕಾರ್ಯಕ್ರಮದ ನಂತರ ನಂದಿನಿ ಮೇಡಂ ಅವರಿಂದ ಅದ್ಭುತವಾದಂತಹ ದೇಶಭಕ್ತಿ ಗೀತೆಯನ್ನು ಕೇಳಿ ಎಲ್ಲರೂ ಆನಂದಿಸಿದರು. ಇದಾದನಂತರ ಡಾ.ಲತಾ ಎಸ್ ಮುಳ್ಳೂರ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ವೆಬಿನಾರ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಮ್ಮ ಸಂಘಕ್ಕೆ ನಿಮ್ಮ ಒಂದು ಸಂದೇಶ ನೀಡಿ ಎಂದರು. ಡಾ ಮಲ್ಲಿಕಾಘಂಟಿ ಮೇಡಂ ಅವರಿಗೆ ಕೇಳಿದಾಗ ಮಲ್ಲಿಕಾ ಘಂಟಿ ಮೇಡಂ ಅವರು

ಶಿಕ್ಷಕಿಯರು ಬರುತ್ತಿದ್ದಾರೆ ದಾರಿ ಬಿಡಿ ಗೌರವ ಕೊಡಿ.

ಎನ್ನುವ ಸಂದೇಶ ನೀಡಿದರು. .ಈ ಒಂದು ಸಂದೇಶ ಸಭೆಯಲ್ಲಿ ಹಾಜರಿದ್ದ ಎಲ್ಲರಿಗೆ ಎಲ್ಲ ಶಿಕ್ಷಕಿಯರಿಗೆ ಒಂದು ಪ್ರೇರಕ ಹೇಳಿಕೆಯಾಯಿತು. ಅಂತಿಮವಾಗಿ ಮಲ್ಲಿಕಾ ಘಂಟಿ ಮೇಡಮ್ ಅವರು
ಬಹು ಅಭಿಪ್ರಾಯಗಳ ಮಧ್ಯೆಯೂ ಏಕರೂಪತೆ ಇರಬೇಕು ಬೇರೊಂದು ಹೆಣ್ಣಿಗೆ ಆದ ನೋವು ಅದು ನಮ್ಮ ನೋವು ಅನ್ನುವ ಎಲ್ಲಾ ಮಹಿಳೆಯರು ಹೊಂದಿದಾಗ ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಹೇಳಿಕೆ ಮಿಥ್ಯವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ .ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೊನೆಗೆ ಅಕ್ಕಮಹಾದೇವಿ ಮೆಡಮ ರಾಜ್ಯ ಸಂಘಟನಾ ಕಾರ್ಯದರ್ಶಿ ಇವರಿಂದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.ಈ ಒಂದು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲು ಶ್ರೀಮತಿ ಭುವನೇಶ್ವರಿ ರಾಜ್ಯ ತಾಂತ್ರಿಕ ವಿಭಾಗದ ಸದಸ್ಯರು ಅವರು ಅತ್ಯಂತ ಸುಂದರವಾಗಿ ಅಚ್ಚುಕಟ್ಟಾಗಿ ನಿರೂಪಣೆಯನ್ನು ನೆರವೇರಿಸಿದರು. ಅದ್ಭುತವಾದ ಇಂತಹ ಅದ್ಭುತವಾದ ವೆಬಿನಾರ್ ಕಾರ್ಯಕ್ರಮವನ್ನು ಆಯೋಜಿಸಿದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಡಾ. ಲತಾ. ಎಸ್ ಮುಳ್ಳೂರ್ ಹಾಗೂ ಜ್ಯೋತಿ ಎಚ್ ಮೇಡಂ ಅವರಿಗೆ ಹಾಗೂ ಉಪನ್ಯಾಸ ನೀಡಿದ ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ ಮೆಡಂ ರವರಿಗೂ ಹೃತ್ಪೂರ್ವಕ ವಂದನೆಗಳು.


ವರದಿ–ಶ್ರೀಮತಿ ಪರವೀನ ಎಚ್. ನದಾಫ ರಾಜ್ಯ ತಾಂತ್ರಿಕ ವಿಭಾಗದ ಸದಸ್ಯರು

ನೂತನ ಶಿಕ್ಷಣ ಸಚಿವರ ಬೇಟಿ-ಶೈಕ್ಷಣಿಕ ಸಭೆಗಳಿಗೆ ಫುಲೆ ಪದಾಧಿಕಾರಿಗಳ ಆಹ್ವಾನಕ್ಕೆ ಬೇಡಿಕೆ.

ತುಮಕೂರು.ಆ.11

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ( ರಿ) ರಾಜ್ಯ ಘಟಕ ಧಾರವಾಡ. ತುಮಕೂರು ಮತ್ತು ಮಧುಗಿರಿ ಜಿಲ್ಲಾ ಘಟಕಗಳ ವತಿಯಿಂದ ಈ ದಿನ ದಿನಾಂಕ -11/8/21ರಂದು ಮುಂಜಾನೆ 8 ಗಂಟೆಗೆ ನೂತನ ಪ್ರಾಥಮಿಕ‌ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾಗಿ ಸಾರಥ್ಯವಹಿಸಿರುವ ಸನ್ಮಾನ್ಯ ಶ್ರೀ ಬಿ.ಸಿ.ನಾಗೇಶ್ ರವರನ್ನು ಭೇಟಿ ಮಾಡಿ ಸ್ವಾಗತಿಸಿ ಗೌರವಿಸಲಾಯಿತು .

ಕರ್ನಾಟಕದ ಏಕೈಕ ಮಹಿಳಾ ಶಿಕ್ಷಕಿಯರ ಸಂಘ ಇದಾಗಿದ್ದು,ರಾಜ್ಯದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲತಾ ಎಸ್.ಮುಳ್ಳೂರವರು ಈ ಸಂಘವನ್ನ ಸಂಸ್ಥಾಪಿಸಿ ಎಲ್ಲಾ ಶಿಕ್ಷಕಿಯರಿಗೂ ಒಂದು ಉತ್ತಮ ಸ್ವಾಭಿಮಾನದ ವೇದಿಕೆಯನ್ನು ಅಕ್ಷರಮಾತೆ ಭಾರತದ ಮೊದಲ ಶಿಕ್ಷಕಿ ತಾಯಿ ಸಾವಿತ್ರಿಬಾಯಿ ಫುಲೆ ಯವರ ಹೆಸರಿನಡಿ ಕಲ್ಪಿಸಿದ್ದಾರೆ.ಇದರಿಂದ ಸಮಸ್ತ ಶಿಕ್ಷಕಿಯರ ಕುಂದು ಕೊರತೆಗಳ ನಿವಾರಣೆಗಾಗಿ ಹಾಗೂ ಹಲವಾರು ಶೈಕ್ಷಣಿಕ ಕಾರ್ಯಾಗಾರ, ಮಕ್ಕಳ ಶೈಕ್ಷಣಿಕ ವಿಚಾರಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಿದೆ. ಇಂತಹ ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘಕ್ಕೂ ಸಹಾ ಪ್ರಾಧಾನ್ಯತೆ ನೀಡಿ ಯಾವುದೇ ಜಿಲ್ಲೆ ಹಾಗೂ ತಾಲ್ಲೂಕು ಶೈಕ್ಷಣಿಕ ಸಭೆಗಳಿಗೆ ಸಂಘದ ಅಧ್ಯಕ್ಷರು ಕಾರ್ಯದರ್ಶಿ ಗಳನ್ನು ಸಹಾ ಆಹ್ವಾನಿಸುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಲ್ಲದೇ ಶೈಕ್ಷಣಿಕ ವಿಚಾರವಾಗಿ ಶಿಕ್ಷಕರ ಸ್ನೇಹಿ ವರ್ಗಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದು ತಮ್ಮ ಪ್ರೋತ್ಸಾಹ ಸಹಕಾರ ಹಾಗೂ ಬೆಂಬಲ ಯಾವಾಗಲೂ ಇರಲಿ ಎಂದು ರಾಜ್ಯ ಉಪಾಧ್ಯಕ್ಷರು ಹಾಗೂ ತುಮಕೂರು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯದೇವಿ ಮನವಿ ಮಾಡಿದ್ದಾರೆ. ಮನವಿಗೆ ಶ್ರೀಯುತರು ಸಕಾರಾತ್ಮಕವಾಗಿ ಸ್ಪಂದಿಸಿದ್ದು,ಉತ್ತಮ ಪ್ರತಿಕ್ರಿಯೆ ನೀಡಿರುವುದು ಎಲ್ಲರಲ್ಲೂ ಸಂತಸ ತಂದಿದೆ ಎಂದು ಮಧುಗಿರಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಮ್ಮ ರವರು ತಿಳಿಸಿದ್ದಾರೆ. ರಾಜ್ಯ ಉಪಾಧ್ಯಕ್ಷರು ಹಾಗೂ
ತುಮಕೂರು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಸೂಯಾದೇವಿ, ಮಧುಗಿರಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಜಿ .ಎಲ್. ರಾಧಮ್ಮ, ಕಾರ್ಯದರ್ಶಿಯಾದ ಶ್ರೀಮತಿ ಲತಾಮಣಿ H.K.ಕೊರಟಗೆರೆ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಸುಜಾತಾ ಜಿ . ತಿಪಟೂರು ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ವನಿತಾ ಬಿ .ಆರ್.ಕಾರ್ಯದರ್ಶಿಯಾದ ಶ್ರೀಮತಿ ಪುಷ್ಪಾವತಿ ಕೋಶಾಧ್ಯಕ್ಷರಾದ ಶ್ರೀಮತಿ ರಾಧಾಮಣಿ ಉಪಾಧ್ಯಕ್ಷರುಗಳಾದ ಶ್ರೀಮತಿ ಮುಕ್ತ ಮಣಿ ಮತ್ತು ಶ್ರೀಮತಿ ಸಾವಿತ್ರಿ ಹಾಗೂ ಸಹ ಕಾರ್ಯದರ್ಶಿಗಳಾದ ಶ್ರೀಮತಿ ಜಯಶೀಲ ಹಾಗೂ ಶ್ರೀಮತಿ ಸೀತಮ್ಮ .ತುರುವೇಕೆರೆ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಲತಾ ರಾಜ್ ಕಾರ್ಯದರ್ಶಿಯಾದ ಶ್ರೀಮತಿ
ಸಾವಿತ್ರಿ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಧ್ಯಕ್ಷರಾದ ಯಶೋದಾ ಗುಬ್ಬಿ ತಾಲ್ಲೂಕಿನ ಶಿಕ್ಷಕರಾದ ಶ್ರೀ ರಂಗಸ್ವಾಮಿ ಜೆ.ಎಸ್ ಹಾಜರಿದ್ದರು .

ಮಹಿಳಾ ಮೀಸಲಾತಿ ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಮನವಿ ಕೊಟ್ಟ ವಿಜಯನಗರ ಫುಲೆ ಶಿಕ್ಷಕಿಯರ ಸಂಘ

ವಿಜಯನಗರ ಆ.04 -2021

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಘಟಕ ಧಾರವಾಡ ,ಜಿಲ್ಲಾ ಘಟಕ ವಿಜಯನಗರ ವತಿಯಿಂದ
ಇಂದು ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಪದಾಧಿಕಾರಿಗಳ ಪರವಾಗಿ ಹಾಗೂ ಸಮಸ್ತ ಮಹಿಳಾ ಶಿಕ್ಷಕಿಯರ ಪರವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಇರುವಂತೆ 33% ಮಹಿಳಾ ಸಂವಿಧಾನಿಕ ಮೀಸಲಾತಿಯನ್ನು ಕರ್ನಾಟಕ ರಾಜ್ಯ ಸಕಾ೯ರಿ ನೌಕರರ ಸಂಘದಲ್ಲು ನೀಡುವಂತೆ ಸ್ನೇಹಪರರೂ, ಮಹಿಳಾ ಪರ ಕಾಳಜಿ ಇರುವ ರಾಜ್ಯ ಸಕಾ೯ರಿ ನೌಕರರ ಸಂಘದ ರಾಜ್ಯಧ್ಯಕ್ಷರಾದ ಶ್ರೀಯುತ ಷಡಕ್ಷರಿ ಸರ್ ಅವರಿಗೆ

ಮನವಿಯನ್ನು ಸಲ್ಲಿಸಲು,ವಿಜಯನಗರ ಜಿಲ್ಲಾ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡ ಸರ್ ಹಾಗೂ ಜಿಲ್ಲಾ ಪ್ರಧಾನಕ್ಯ೯ದಶಿ೯ಗಳಾದ ಶ್ರೀ ಕಡ್ಲಿ ವೀರಭದ್ರೇಶ ಸರ್ ಅವರಿಗೆ ನಮ್ಮ ಸಂಘದ ಬೆನ್ನೆಲುಬಾಗಿ ನಿಂತಿರುವ ಹಿರಿಯ ಶಿಕ್ಷಕರ ಸಮ್ಮುಖದಲ್ಲಿ, ವಿಜಯನಗರ ಜಿಲ್ಲಾ ಹಾಗೂ ಎಲ್ಲಾ ತಾಲೂಕು ಘಟಕಗಳ ವತಿಯಿಂದ ಮನವಿ ಸಲ್ಲಿಸಲಾಯಿತು.
ನಮ್ಮ ಮನವಿಯನ್ನು ಸ್ವೀಕರಿಸಿ ಸದಾ ಮಹಿಳಾ ಪರ ಇರುವ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘಕ್ಕೆ ನಮ್ಮ ಬೆಂಬಲ ಯಾವತ್ತು ಸದಾ ಇರುತ್ತದೆ ಎಂದು ಆತ್ಮಸ್ಥೈಯ೯ ತುಂಬಿದರು. ಮನವಿಯನ್ನು ಸ್ವೀಕರಿಸಿದ ರಾಜ್ಯ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಅನಂತ ಅನಂತ ಧನ್ಯವಾದಗಳನ್ನು ಜಿಲ್ಲಾಧ್ಯಕ್ಷರು ಸಲ್ಲಿಸಿದ್ದಾರೆ.

ಅಧ್ಯಕ್ಷರೇ.ಮಹಿಳಾ ನೌಕರರಿಗೆ ಸಾಂವಿಧಾನಿಕ ಮೀಸಲಾತಿ ಕೊಡಿ – ಡಾ.ಲತಾ.ಎಸ್.ಮುಳ್ಳೂರ

ಗೆ,
ಶ್ರೀ ಸಿ.ಎಸ್. ಷಡಾಕ್ಷರಿ
ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ.(ರಿ) ಬೆಂಗಳೂರು
ಕಬ್ಬನ್ ಉದ್ಯಾನವನ ಬೆಂಗಳೂರು-560001

*ವಿಷಯ:* ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಸಾಂವಿಧಾನಿಕ ಸಮಾನತೆಗಾಗಿ ಮಹಿಳಾ ನೌಕರರಿಗೆ ಮೀಸಲಾತಿ ಕಲ್ಪಿಸುವ ಕುರಿತು

ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಹುಟ್ಟು ಹಾಕಿದ ದಿಟ್ಟ ಮಹಿಳೆ ಹಾಗೂ ಎಲ್ಲಾ ನೌಕರರ ವಿಶ್ವಾಸಕ್ಕೆ ದ್ವನಿಯಾಗಿದ್ದ ದಿ.ಶ್ರೀಮತಿ ಮೇರಿ ದೇವಾಸಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.. ಹಾಗಾಗಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಲ್ಲಿ ಬಹುತೇಕ ಮಹಿಳಾ ನೌಕರರೇ ಬಹಳಷ್ಟು ಇದ್ದಾರೆ, ಎಲ್ಲಾ ಸರ್ಕಾರಿ ಮಹಿಳಾ ನೌಕರರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅಂದಿನಿಂದಲೂ ಎಲ್ಲರೂ ನೌಕರರ ಸಂಘಕ್ಕೆ ವಾರ್ಷಿಕ ವಂತಿಕೆ ಹಣವನ್ನು ಪ್ರಾಮಾಣಿಕ ವಾಗಿ ಸಲ್ಲಿಸುತ್ತಾ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ 33% ಮಹಿಳಾ ಶಿಕ್ಷಕಿಯರಿಗೆ ಮೀಸಲಾತಿ ಕಲ್ಪಿಸಿರುವಂತೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕ್ರಿಯಾಶೀಲ, ಮಹಿಳಾಪರ ಅಪಾರ ಕಾಳಜಿ ಹೊಂದಿರುವ ಅಧ್ಯಕ್ಷರಾದ ತಾವುಗಳು ಸಹಾ ಮಹಿಳಾ ನೌಕರರಿಗೆ, ನೌಕರರ ಸಂಘದಲ್ಲಿ ಸಾಂವಿಧಾನಿಕವಾಗಿ ಸಿಗಬೇಕಾದ ಮಹಿಳಾ ಮೀಸಲಾತಿ ಕಲ್ಪಿಸಬೇಕು. ರಾಜ್ಯದ ಸಮಸ್ತ ಮಹಿಳಾ ನೌಕರರಿಗೆ ಸಮಾನತೆಯ ಹಾದಿಯಲ್ಲಿ ನ್ಯಾಯ ಒದಗಿಸಿ ಕೊಡಲೇ ಬೇಕಾಗಿ ಒತ್ತಾಯಿಸಿ ಮನವಿ ಸಲ್ಲಿಸುತ್ತಿದ್ದೇವೆ.

ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಜಿಲ್ಲಾ ತಾಲೂಕು ಪದಾಧಿಕಾರಿಗಳು ಹಾಗೂ ಸಮಸ್ತ ಮಹಿಳಾ ನೌಕರರ ಪರವಾಗಿ.ಡಾ.ಲತಾ ಎಸ್ ಮುಳ್ಳೂರ ರವರು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ರವರಿಗೆ ಬೇಡಿಕೆ ಇಟ್ಟಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದ ಗುಬ್ಬಿ ತಾಲ್ಲೂಕು ಫುಲೆ ಶಿಕ್ಷಕಿಯರ ಸಂಘ

ಗುಬ್ಬಿ,ಆ.03-ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ತಾಲ್ಲೂಕು ಘಟಕ ಗುಬ್ಬಿ ಯ ನೂತನ ಪದಾಧಿಕಾರಿಗಳು
ಪರಿಚಯಪೂರ್ವಕ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳುವುದರ ಮೂಲಕ ಎಲ್ಲಾ ಪದಾಧಿಕಾರಿಗಳು ಹಾಜರಾಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸೋಮಶೇಖರ್ ಸರ್ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳಾದ ಶ್ರೀಯುತ ಯೋಗಾನಂದ್ ಸರ್ ಅವರನ್ನು ಬೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯ ದೇವಿಯವರು, ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಯವರು,ಗೌರವಾಧ್ಯಕ್ಷರಾದ

ಶ್ರೀಮತಿ ದೇವಿಕಾ ರವರು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಭಾರತಿ ಬಾಯಿಯವರು, ಕೋಶಾಧ್ಯಕ್ಷರಾದ ಶ್ರೀಮತಿ ಅನಿತರವರು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳೂ ಹಾಜರಿದ್ದರು.

ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯದೇವಿ ರವರು ಮಾತನಾಡಿ ಸಂಘದ ಧ್ಯೇಯೋದ್ದೇಶಗಳ ಬಗ್ಗೆ, ಯೋಜನೆಗಳ ಬಗ್ಗೆ, ಸಂಘದ ಕಾರ್ಯವೈಖರಿ ಕುರಿತು ತಿಳಿಸಿದರು. ತಾಲ್ಲೂಕಿನ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಯವರು ಶಾಲಾ ಕರ್ತವ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಸಂಘದ ಚಟುವಟಿಕೆಗಳನ್ನು ನಡೆಸುವುದಾಗಿ ತಿಳಿಸಿದರು.

ಮಾನ್ಯBEO ಸರ್ ಮಾತನಾಡುತ್ತಾ ಸಂಘವು ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಬಗ್ಗೆ ತಿಳಿದಿದೆ ಹೀಗೆಯೇ ಶಿಕ್ಷಕರಿಗೆ, ಮಕ್ಕಳಿಗೆ,ಉಪಯೋಗವಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯಿರಿ ಎಂದು ಶುಭ ಹಾರೈಸಿದರು. ತಾಲ್ಲೂಕಿನ ಅಕ್ಷರ ದಾಸೋಹ ಅಧಿಕಾರಿಯಾದ ಶ್ರೀ ಯೋಗಾನಂದ್ ಸರ್ ಅವರು ಮಾತನಾಡುತ್ತಾ ನಾನು ಸಂಘ, ಸಂಘಟನೆ ಎಂದು ಕೆಲಸ ಮಾಡಿದ್ದೇನೆ ನಿಮಗೆ ನನ್ನ ಸಹಕಾರ ಯಾವಾಗಲೂ ಇರುತ್ತದೆ ಎಂದರು. ಈ ಕಾರ್ಯಕ್ರಮದ ರೂವಾರಿ, ಸಂಘದ ಬೆನ್ನೆಲುಬುಗಳಾದ ಸುರೇಶ್ ಸರ್, ರಂಗಸ್ವಾಮಿ ಸರ್, ರವೀಶ್ ಸರ್ ಇವರುಗಳು ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದರು. ಈ ಕಾರ್ಯಕ್ರಮಕ್ಕೆ ಆಗಮಿಸಿ ಸಹಕರಿಸಿ ಯಶಸ್ವಿಯಾಗಲು ಶ್ರಮಿಸಿದ ಎಲ್ಲರನ್ನೂ  ಎಲ್ಲ ಪದಾಧಿಕಾರಿಗಳ ಪರವಾಗಿ
ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಿ ಬಾಯಿ ರವರುಗಳು ಧನ್ಯವಾದ ಸಲ್ಲಿಸಿದ್ದಾರೆ.