ಶಿಶುಪಾಲನೆ ರಜೆಗೆ ಮೂಲ ಕಾರಣರಾದ IAS ಅಧಿಕಾರಿಯನ್ನು ಗೌರವಿಸಿ ಸನ್ಮಾನಿಸಿದ ರಾಜ್ಯ ಫುಲೆ ಸಂಘ

ಕಲ್ಬುರ್ಗಿ June-23.
ರಾಜ್ಯದ ಸಮಸ್ತ ಸರ್ಕಾರಿ ಮಹಿಳಾ ಸಿಬ್ಬಂದಿಗಳಿಗೆ ತಮ್ಮ ಸೇವಾವಧಿಯಲ್ಲಿ ಒಟ್ಟು 180 ದಿನಗಳ ಶಿಶುಪಾಲನೆ ರಜೆಗಳನ್ನು ಘೋಷಣೆ ಮಾಡಿ ಘನ ಸರ್ಕಾರವು ಆದೇಶ ಮಾಡಿರುತ್ತದೆ.ರಾಜ್ಯದ ಎಲ್ಲಾ ಸರ್ಕಾರಿ,ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನು ಒಳಗೊಂಡ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಸರ್ಕಾರದ ಈ ಆದೇಶವನ್ನು ಸಂತಸದಿಂದ ಸ್ವಾಗತಿಸಿದೆ.ಹಾಗೂ ಘನ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದೆ.

ನಲಿನ್ ಅತುಲ್.IAS. ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.ಕಲ್ಬುರ್ಗಿ ವಿಭಾಗ


ಮಕ್ಕಳಿಗೆ ಮಾತೃ ವಾತ್ಸಲ್ಯದ ಪ್ರೀತಿ ಮಮಕಾರದ ಅಮ್ಮನ ತೋಳಿನ ಆರೈಕೆ ಅಗತ್ಯವಾಗಿ ಬೇಕಾಗಿತ್ತು. ಇದು ಅತೀ ಮುಖ್ಯವಾಗಿ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೆ ಅನಿವಾರ್ಯವಾಗಿತ್ತು.ಇದು ರಾಜ್ಯದ ಎಲ್ಲಾ ಮಹಿಳಾ ನೌಕರರಿಗೆ ಸಂತಸ ತಂದಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಕಲ್ಬುರ್ಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಶ್ರೀ ನಲಿನ್ ಅತುಲ್ ರವರು ಈ ಶಿಶುಪಾಲನೆ ರಜೆ ಕೋರಿ ಘನ ಸರ್ಕಾರಕ್ಕೆ ಐದು ಪುಟಗಳ ಸಮಗ್ರ ಪ್ರಸ್ಥಾವನೆಯನ್ನು ಸಲ್ಲಿಸಿ ಗಮನ ಸೆಳೆದಿದ್ದರು.ಈ ಆದೇಶದ ಮೂಲ‌ ಕಾರಣ ಅವರೇ ಆಗಿದ್ದಾರೆ ಎಂದು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ. ಎಸ್.ಮುಳ್ಳೂರ ರವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಕಲ್ಬುರ್ಗಿ ಜಿಲ್ಲಾ ಘಟಕವು ಅವರಿಗೆ ಇಂದು ಸನ್ಮಾನಿಸಿ ಗೌರವಿಸಿದೆ.
ಈ ಸಂದರ್ಭದಲ್ಲಿ, ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಚನ್ನಬಸಪ್ಪ ಮುಧೋಳ ಸರ್ ಹಾಗೂ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸೇವಂತ ಚೌಹಾಣ್,ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಸಾವಿತ್ರಿ ಪಾಟೀಲ್ ಹಾಗೂ ಪದಾಧಿಕಾರಿಗಳಾದ ಗಂಗಮ್ಮ ನಾಲ್ವರ್, ರೇಣುಕಾ ಎನ್, ವಿಶಾಲಾಕ್ಷಿ, ರಾಜೇಶ್ವರಿ, ವಿಜಯಲಕ್ಷ್ಮಿ ಹಿರೇಮಠ್, ಮಲ್ಲಮ್ಮ, ಯಶೋಧ ಉಪಸ್ಥಿತರಿದ್ದರು.

ಮಹಿಳಾ ನೌಕರರಿಗೆ ಸರ್ಕಾರದ ಬಂಪರ್ ಕೊಡುಗೆ-ಧನ್ಯವಾದ ಸಲ್ಲಿಸಿದ ಶಿಕ್ಷಕಿಯರ ಸಂಘ

ಧಾರವಾಡ ಜೂ.22

2020-21 ಸಾಲಿನ ರಾಜ್ಯದ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ‌ನವರು ರಾಜ್ಯದ ಎಲ್ಲಾ ಮಹಿಳಾ ನೌಕರರಿಗೆ ಮಕ್ಕಳ ಆರೈಕೆ ಮಾಡುವ ಸಲುವಾಗಿ ಶಿಶುಪಾಲನಾ ರಜೆ ಘೋಷಣೆ ಮಾಡಿದ್ದರು. ಅಂದಿನಿಂದ
ಶಿಶುಪಾಲನಾ ರಜೆ ಸಂಬಂಧ ಸರ್ಕಾರದ ಆದೇಶಕ್ಕಾಗಿ ಎದುರು ನೋಡುತ್ತಾ ಇದ್ದ ರಾಜ್ಯದ ಸಮಸ್ತ ಮಹಿಳಾ ನೌಕರರು,ಶಿಕ್ಷಕಿಯರುಗಳಿಗೆ ಘನ‌ ಸರ್ಕಾರ ಇಂದು ಆದೇಶ ಜಾರಿ ಮಾಡಿದೆ.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಇದರ ಸಂಬಂಧ ಸರ್ಕಾರಕ್ಕೆ ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಿ ಗಮನ ಸೆಳೆದಿತ್ತು.ಸರ್ಕಾರ ಸ್ಪಂದಿಸಿ ಅಧೀಕೃತ ಆದೇಶವನ್ನು ಇಂದು ಪ್ರಕಟಿಸಿದೆ .ಇದರಿಂದ ರಾಜ್ಯದ ಎಲ್ಲಾ ಮಹಿಳಾ ನೌಕರರು ಒಮ್ಮೆಗೆ 15 ದಿನಗಳಿಗೂ ಕಡಿಮೆ ಇಲ್ಲದಂತೆ ಅನುಕೂಲಕ್ಕೆ ಅನುಗುಣವಾಗಿ ತಮ್ಮ ಸಂಪೂರ್ಣ ಸೇವಾವಧಿಯಲ್ಲಿ ಒಟ್ಟು 180 ದಿನಗಳ ಶಿಶುಪಾಲನೆ ರಜೆಯನ್ನು ಪಡೆಯಬಹುದಾಗಿದೆ.ಯಾವುದೇ ದಾಖಲೆ ಪ್ರಮಾಣ ಪತ್ರಗಳ ಅಗತ್ಯವಿಲ್ಲದೆ ಸೇವಾವಹಿಯಲ್ಲಿನ ಮಾಹಿತಿ ಆಧರಿಸಿ ಮಕ್ಕಳ ಸಂಖ್ಯೆಗೆ ಮಿತಿಯಿಲ್ಲದೆ ಕಿರಿಯ ಮಗುವಿಗೆ 18 ವರ್ಷ ತುಂಬುವವರೆಗೆ ಶಿಶುಪಾಲನೆ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಇದರಿಂದ ರಾಜ್ಯದ 75% ಗೂ ಹೆಚ್ಚಿರುವ ಮಹಿಳಾ ನೌಕರರುಗಳಿಗೆ ಅನುಕೂಲವಾಗಿದೆ,ಇದರಿಂದ ಎಲ್ಲಾ ಮಹಿಳಾ ಶಿಕ್ಷಕಿಯರು ಸಂತಸ ವ್ಯಕ್ತಪಡಿಸಿದ್ದಾರೆ,

ನಲಿನ್ ಅತುಲ್ IAS,ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.

ಇಂದಿನ ಈ ಶುಭ ದಿನದಂದು
ಘನ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ನವರಿಗೆ ಹಾಗೂ ಮಹಿಳಾ ನೌಕರರ ಪರ ಶಿಶುಪಾಲನೆ ರಜೆ ಕೋರಿ ಪ್ರಸ್ತಾವನೆ ಸಲ್ಲಿಸಿ ಸರ್ಕಾರದ ಗಮನ ಸೆಳೆದಿದ್ದ ಕಲ್ಬುರ್ಗಿ ವಲಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಮಾನ್ಯ ನಲಿನ್ ಅತುಲ್ ರವರಿಗೂ ಹಾಗೂ ಆದೇಶ ಹೊರಬೀಳಲು ಸಹಕರಿಸಿದ ಘನ ಸರ್ಕಾರದ ಎಲ್ಲಾ ಮಾನ್ಯ ಕಾರ್ಯದರ್ಶಿಗಳಿಗೆ,ಅಧಿಕಾರಿಗಳಿಗೆ, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ‌ಶಿಕ್ಷಕಿಯರ ಪರವಾಗಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ‌ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ. ಹೆಚ್.ರವರಗಳು ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಸಸಿಗೆ ಬೇಡಿಕೆ ಇಟ್ಟ ಫುಲೆ ಶಿಕ್ಷಕಿಯರ ಸಂಘ

ಶಿವಮೊಗ್ಗ ಜೂ21.
ಬರಡಾದ ನೆಲಕ್ಕೆ ಜೀವಚೈತನ್ಯ ತಲುಪಿಸುವ ಹೊಣೆ ಹೊತ್ತು, ಸದ್ದಿಲ್ಲದೆ ಚಿಗುರೊಡೆದು ಬಂದ ಫುಲೆ ಸಂಘವು ಪ್ರಕೃತಿ ಯಂತೆ ಶುದ್ಧ. ವನಸಿರಿಯ ಪ್ರೀತಿಯಂತೆ ಅದಕ್ಕೆ ಪರ್ಯಾಯ ಪದ ಇಲ್ಲವೆನ್ನುವಷ್ಟು ಪರಿಶುದ್ಧ ಎಂಬ ನುಡಿಯಂತೆ ಇಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘವು, ಶಿವಮೊಗ್ಗದ ವಲಯ ಅರಣ್ಯಾಧಿಕಾರಿ ಶ್ರೀ ಉಮೇಶ್ ರವರಿಗೆ ಔಷಧಿಯುಕ್ತ ಹಾಗೂ ಉಪಯುಕ್ತ ಸಸಿಗಳನ್ನು ನೀಡುವಂತೆ ಮನವಿ ಮಾಡಿದೆ.ವಲಯ ಅರಣ್ಯಾಧಿಕಾರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತಮ ಕೆಲಸದಲ್ಲಿ ಫುಲೆ ಶಿಕ್ಷಕಿಯರ ಸಂಘ ತೊಡಗಿಸಿಕೊಂಡಿದೆ ಹೀಗೇ ಮುಂದೆಯು ಪರಿಸರ ಪ್ರೇಮ ‌ಪರಿಸರ ಪ್ರಜ್ಞೆ ಎಲ್ಲರಲಿ ಮೂಡಿಸುವಂತ ಕಾರ್ಯಕ್ರಮಗಳನ್ನು ಫುಲೆ ಸಂಘವು ಹಮ್ಮಿಕೊಳ್ಳಲು ನಮ್ಮ ಸಹಕಾರ ಎಂದಿಗೂ ಸಿಗುತ್ತದೆ ಎಂದು ಭರವಸೆ ನೀಡಿದ್ದು,ಈ ಸಸಿಗಳನ್ನು
ರವೀಂದ್ರ ನಗರದ ಸರ್ಕಾರಿ ಶಾಲೆಯ ಆವರಣದಲ್ಲಿ ನೆಟ್ಟು ಬೆಳೆಸಿ ಪೋಷಿಸುವ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಸಂಘಟನೆ ಹೊರಲಿದೆ ಎಂದು ಜಿಲ್ಲಾಧ್ಯಕ್ಷರಾದ ರಾಧಾ ರವರು ತಿಳಿಸಿದ್ದಾರೆ..
ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ನರಗುಂದ ಹಾಗೂ ಜಿಲ್ಲಾ ಕೋಶಾಧ್ಯಕ್ಷರಾದ ಲಲಿತ ರವರು,ತಾಲೂಕಿನ ಅಧ್ಯಕ್ಷರಾದ ಶಾಹಿನ ಬಾನು,ತಾಲ್ಲೂಕಿನ ಕೋಶಾದಕ್ಷರಾದ ಲಕ್ಷ್ಮಿ ರವರುಗಳು ಸಂಘದ ಎಲ್ಲಾ ಪದಾಧಿಕಾರಿಗಳು ಪರವಾಗಿ ಭಾಗವಹಿಸಿ ಮನವಿ ಮಾಡಿಕೊಂಡಿದ್ದಾರೆ.

ಶಿಶುಪಾಲನೆ ರಜೆ- ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಛೇರಿಗೆ ಬೇಟಿ.

ಬೆಂಗಳೂರು ಜೂನ್-21

2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ೬ ತಿಂಗಳ ಶಿಶುಪಾಲನಾ ರಜೆಯನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶೀಘ್ರದಲ್ಲಿ ಜಾರಿಯಾಗಲು
ಸರ್ಕಾರದ ಆದೇಶ ಹೊರಬೀಳಬೇಕಾಗಿದೆ.

ಇಂತಹ ಕೋವಿಡ್ ಸಂಕಷ್ಟದಿನದಲ್ಲಿ ಶಿಶು ಆರೈಕೆ ರಜೆಯು ಪ್ರತಿ ಮಹಿಳಾ ನೌಕರರಿಗೆ ಅನಿವಾರ್ಯವಾಗಿದ್ದು ಅತ್ಯಂತ ಮಹತ್ವದ ಆದೇಶವಾಗಿರುತ್ತದೆ.
ಇಂದು ರಾಜ್ಯದ ಎಲ್ಲಾ ಮಹಿಳಾ ನೌಕರರು ,ಶಿಕ್ಷಕಿಯರು ಸರ್ಕಾರದ ಈ ಆದೇಶವನ್ನೇ ಎದುರು ನೋಡುತ್ತಿದ್ದಾರೆ.
ಘನ ಸರ್ಕಾರವು
ಅತೀ ಶೀಘ್ರದಲ್ಲಿ ರಾಜ್ಯ ಮಹಿಳಾ ನೌಕರರಿಗೆ ‘೬ ತಿಂಗಳ ಶಿಶುಪಾಲನಾ ರಜೆ’ ಯ ಸರ್ಕಾರಿ ಆದೇಶವನ್ನು ಮಾಡಿಕೊಡುವಂತೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ‌ ಶಿಕ್ಷಕಿಯರ ಸಂಘದ ಬೆಂಗಳೂರು ದಕ್ಷಿಣ ಭಾಗ-1 ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಕೆ.ಶಾಸ್ತ್ರೀ ,ಉಪಾಧ್ಯಕ್ಷರುಗಳಾದ ಶ್ರೀಮತಿ ನೂರುನ್ನೀಸಾ, ಶ್ರೀಮತಿ ಮಣಿ,ಆರ್ ಹಾಗೂ ಕೋಶಾಧ್ಯಕ್ಷರಾದ ಶ್ರೀಮತಿ ಉಮಾದೇವಿ ರವರುಗಳು ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು,(DPAR) ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಕಛೇರಿಗೆ ಖುದ್ದಾಗಿ ಬೇಟಿ ಮಾಡಿ ಅತೀ ಶೀಘ್ರವಾಗಿ ಆದೇಶ ಹೊರಡಿಸಲು ಮನವಿ ಮಾಡಿಕೊಂಡಿರುತ್ತಾರೆ.
ಹಾಗೆಯೇ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು, ವಿಧಾನಸೌಧ, ಬೆಂಗಳೂರು
ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಆರ್ಥಿಕ ಇಲಾಖೆ), ವಿಧಾನಸೌಧ, ಬೆಂಗಳೂರು ರವರುಗಳಿಗೂ ಸಹಾ ಖುದ್ದಾಗಿ ಬೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಶಿಶುಪಾಲನಾ ರಜೆ ಶೀಘ್ರವಾಗಿ ಜಾರಿಯಾಗಲಿ-ಡಾ.ಲತಾ.ಎಸ್.ಮುಳ್ಳೂರ ಮನವಿ

ಧಾರವಾಡ ಜೂನ್ 18.

ಶಿಶುಪಾಲನೆ ರಜೆ ಕುರಿತ ಸರ್ಕಾರದ ಆದೇಶ ಮಾಡಲು ಮನವಿ ಸಲ್ಲಿಸಿದ ರಾಜ್ಯ ಫುಲೆ ಸಂಘ

2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ೬ ತಿಂಗಳ ಶಿಶುಪಾಲನಾ ರಜೆಯನ್ನು ಘೋಷಣೆ ಮಾಡಿದ್ದು,
ಇದು ಮಹಿಳಾ ನೌಕರರ ಮತ್ತು ಶಿಕ್ಷಕಿಯರ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಿಗಿರುವ ಕಾಳಜಿಯನ್ನು ತೋರಿಸುತ್ತದೆ.


ಇದು ರಾಜ್ಯದ ಎಲ್ಲಾ ಮಹಿಳಾ ಸರ್ಕಾರಿ ನೌಕರರು ಮತ್ತು ಮಹಿಳಾ ಶಿಕ಼ಕಿಯರಿಗೆ ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ರಾಜ್ಯದ ಸರ್ವ ಮಹಿಳಾ ಶಿಕ್ಷಕಿಯರೆಲ್ಲರೂ ಅಭಾರಿಯಾಗಿದ್ದೇವೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರವರು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.


ಅತೀ ಶೀಘ್ರದಲ್ಲಿ ರಾಜ್ಯ ಮಹಿಳಾ ನೌಕರರಿಗೆ ‘೬ ತಿಂಗಳ ಶಿಶುಪಾಲನಾ ರಜೆ’ ಯ ಸರ್ಕಾರಿ ಆದೇಶವನ್ನು ಮಾಡಿಕೊಡುವಂತೆ ಘನ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳವರಿಗೆ ಹಾಗೂ
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳವರಿಗೆ
ಡಾ. ಲತಾ. ಎಸ್. ಮುಳ್ಳೂರ ಹಾಗೂ
ರಾಜ್ಯ ಪ್ರಧಾನ ಕಾರ್ಯದರ್ಶಿ
ಶ್ರೀಮತಿ ಜ್ಯೋತಿ. H ರವರುಗಳು ಮನವಿ ಮಾಡಿದ್ದಾರೆ. ಹಾಗೆಯೇ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು, ವಿಧಾನಸೌಧ, ಬೆಂಗಳೂರು ಹಾಗೂ‌ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಆರ್ಥಿಕ ಇಲಾಖೆ), ವಿಧಾನಸೌಧ, ಬೆಂಗಳೂರು ಇವರುಗಳಿಗೂ ಸಹ ಮನವಿ ಪ್ರತಿಗಳನ್ನು ಸಲ್ಲಿಸಿದ್ದಾರೆ.

ಬಿ.ಇ.ಒ ಅಧಿಕಾರಿಗೆ ಮನವಿ ಸಲ್ಲಿಕೆ

ತೀರ್ಥಹಳ್ಳಿ ಜೂ.13. ಕೋವಿಡ್ 19 ಮಹಾ ರೋಗವು ಉಲ್ಬಣಗೊಂಡು ವಿಶ್ವವ್ಯಾಪಿ ಜನಜೀವನವನ್ನು ತಲ್ಲಣಗೊಳಿಸಿದೆ.
ಅದರಲ್ಲೂ ಎರಡನೇ ಅಲೆಯು ನಮ್ಮ ದೇಶದಲ್ಲಿ ಅತೀವ ಶೀಘ್ರವಾಗಿ ವ್ಯಾಪಿಸಿ ಲಕ್ಷಾಂತರ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸಾವಿರಾರು ಜನರ ಜೀವಹಾನಿ ಮಾಡಿರುತ್ತದೆ
ಇದು ಶೈಕ್ಷಣಿಕ ರಂಗದ ಮೇಲೆ ಪ್ರಭಾವ ಬೀರಿರುತ್ತದೆ
ಇನ್ನು ತಜ್ಞರ ಅಭಿಪ್ರಾಯದಂತೆ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು ಎಂದು ವರದಿ ಮಾಡಿರುತ್ತಾರೆ.


ಈಗಾಗಲೇ ಶಿಕ್ಷಣ ಇಲಾಖೆಯು 2021 22ನೇ ಸಾಲಿನ ಶೈಕ್ಷಣಿಕ ಅವಧಿ ಶಾಲಾ ದಾಖಲಾತಿ ಪ್ರಾರಂಭಿಸಲು ಸೂಚಿಸಿದೆ. ಆದ್ದರಿಂದ ಕೋವಿಡ್ ಡ್ಯೂಟಿ ಮಾಡುವ ಶಿಕ್ಷಕರಿಗೆ ಮಾತ್ರವಲ್ಲದೆ ತಾಲೂಕಿನ ಪ್ರತಿ ಶಿಕ್ಷಕರಿಗೂ ಅವರ ಆರೋಗ್ಯದ ಹಿತದೃಷ್ಟಿಯಿಂದ ಮೊದಲ ಸಾಲಿನ ಆದ್ಯತೆ ನೀಡಿ ಕೋವಿಡ್ ಲಸಿಕೆ ಹಾಕಿಸಬೇಕೆಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತೀರ್ಥಹಳ್ಳಿ
ತಾಲ್ಲೂಕು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಮನವಿ ಸಲ್ಲಿಸಿದೆ.ತಾಲ್ಲೂಕಿನ ಅಧ್ಯಕ್ಷರಾದ ಭಾರತಿ ಕೆ ಎಸ್ ,ಪ್ರಧಾನ ಕಾರ್ಯದರ್ಶಿಗಳಾದ ನರ್ಮದಾ ಎಂ ವಿ,ಕೋಶಾಧ್ಯಕ್ಷರು ನಂದಿನಿ ರವರುಗಳು
ಎಲ್ಲಾ ಪದಾಧಿಕಾರಿಗಳ ಪರವಾಗಿ ಹಾಜರಿದ್ದರು.

ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ಮಾಡಿದ ಶಿಕ್ಷಕಿಯರ ಸಂಘ

ಧಾರವಾಡ ಜೂನ್ -12
ಕೊವಿಡ್ ಎರಡನೇ ಅಲೆ ಇಡೀ ರಾಜ್ಯದ ಜನ ಸಮುದಾಯವನ್ನೇ ತಲ್ಲಣಗೊಳಿಸಿದ್ದಲ್ಲದೇ ಕೊರೊನಾ ಸೋಂಕಿಗೆ ಸಿಕ್ಕಿ ಹಲವಾರು ಶಿಕ್ಷಕರ ಪ್ರಾಣ ಬಲಿಯಾಗಿದೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಅವಧಿ ಜುಲೈ-1 ರಿಂದ ಪ್ರಾರಂಭವಾಗುತ್ತಿದ್ದು,ಶಿಕ್ಷಕರು ಹದಿನೈದು ದಿನ‌ ಮೊದಲೇ ಜೂನ್ -15 ಕ್ಕೆ ಪೂರ್ವ‌ಸಿದ್ದತೆಗಾಗಿ ಶಾಲೆಗೆ ಹೋಗಬೇಕೆಂದು ಇಲಾಖೆಯು ಆದೇಶ ಹೊರಡಿಸಿದೆ.ಇದರಿಂದ ಎಲ್ಲ ಶಿಕ್ಷಕರಿಗೂ ಸಮಸ್ಯೆ ಎದುರಾಗಿದೆ.
ಕೊವಿಡ್ ಲಾಕ್ ಡೌನ್ 11 ಜಿಲ್ಲೆಗಳಲ್ಲಿ ಮುಂದುವರೆದಿದ್ದು,ಉಳಿದ 20 ಜಿಲ್ಲೆಗಳಲ್ಲಿ ಸೆಮಿ ಲಾಕ್ಡೌನ್ ಮಾಡಲಾಗಿದೆ ಸರಿಯಷ್ಟೆ.ಆದರೆ
ಕೆ.ಎಸ್.ಆರ್.ಟಿ.ಸಿ.
ಬಸ್ ಸಂಚಾರ ರಾಜ್ಯದಾದ್ಯಂತ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಇಂತ ಪರಿಸ್ಥಿತಿಯಲ್ಲಿ ಸರ್ಕಾರಿ ಬಸ್ ನ್ನೇ ಸಂಪೂರ್ಣ ಅವಲಂಬಿಸಿಕೊಂಡು ಶಾಲೆಗೆ ಹೋಗಬೇಕಾದ ಶಿಕ್ಷಕರುಗಳಿಗೆ ಜೂನ್-15 ಕ್ಕೆ ಶಾಲೆಗೆ ತೆರಳಲು ಕಷ್ಟಸಾದ್ಯವಾಗಿದೆ.ಅದರಲ್ಲು ಮಹಿಳಾ ಶಿಕ್ಷಕಿಯರಿಗೆ ಶಾಲೆಗೆ ಹೋಗಲು ಹೆಚ್ಚು ತೊಂದರೆಯಾಗಿರುತ್ತದೆ. ಆದ್ದರಿಂದ ಘನ ಸರ್ಕಾರವು ಈ ಎಲ್ಲಾ ಪರಿಸ್ಥಿತಿಯನ್ನು ಮರುಪರಿಶೀಲಿಸಿ, ಎಲ್ಲಾ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ ಶಾಲೆ ಪ್ರಾರಂಭವಾಗುವ ಎರಡು ದಿನಗಳ ಮೊದಲು ಜೂನ್ 29 ಕ್ಕೆ ಶಾಲೆಗೆ ಹಾಜರಾಗಲು ಸೂಚಿಸಿ ಆದೇಶ ಮಾಡಬೇಕೆಂದು ಹಾಗೂ ಗರ್ಭಿಣಿ ಶಿಕ್ಷಕಿಯರಿಗೆ, ಒಂದು ವರ್ಷ ಮಗು ಹಾರೈಕೆ ಮಾಡುತ್ತಿರುವ ಶಿಕ್ಷಕಿಯರಿಗೆ,ವಿಕಲಚೇತನ ಶಿಕ್ಷಕಿಯರಿಗೆ ಹಾಗೂ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ಶಿಕ್ಷಕಿಯರಿಗೆ ಕೊವಿಡ್ ಅಲೆ ಸುಧಾರಣೆ ಆಗುವವರೆಗೆ ವರ್ಕ್ ಫ್ರಂ ಹೋಂ ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಿ ಅನುಕೂಲ ಮಾಡಿಕೊಡಬೇಕೆಂದು ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಸುರೇಶ ಕುಮಾರ್.ಎಸ್ ರವರನ್ನು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ರವರುಗಳು ಸಮಸ್ತ ಶಿಕ್ಷಕ,ಶಿಕ್ಷಕಿಯರ ಪರವಾಗಿ ಮನವಿಯನ್ನು ಮಾಡಿದ್ದಾರೆ.