ಧಾರವಾಡ: ಮಾರ್ಚಿ.05,2025

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧನೆಗೈದ ಅನೇಕ ಶಾಲಾ ಶಿಕ್ಷಕಿಯರಿಗೆ ಮಾತೆ ಸಾವಿತ್ರಿಬಾಯಿ ಫುಲೆ ಹೆಸರಲ್ಲಿ ಪ್ರಶಸ್ತಿಗಳನ್ನು ಅನೇಕ ಸಂಘ ಸಂಸ್ಥೆಗಳಿಂದ ನೀಡಲಾಗುತ್ತಿದ್ದು ಇದರಿಂದ ಮಾತೆಯ ಹೆಸರು ಮತ್ತಷ್ಟು ಮೊಗದಷ್ಟು ಮುನ್ನಡೆಗೆ ಬರಲು ಸಾಧ್ಯವಾಗಿದೆ ಅಲ್ಲದೆ ಇವುಗಳು ಶಿಕ್ಷಕಿಯರಿಗೆ ಮಾತೆಯ ಸ್ಮರಣಿಕೆಯ ಹಾಗೂ ಪ್ರೋತ್ಸಾಹದಾಯಕ ಪ್ರಶಸ್ತಿಗಳಾಗಿವೆ.
ಆದರೆ ಈ ಎಲ್ಲದಕ್ಕೂ ಮುಖ್ಯವಾಗಿ ಮಾತೆಯ ಹೆಸರಲ್ಲಿ ಸರ್ಕಾರಿ, ಅನುದಾನಿತ, ಪ್ರಾಥಮಿಕ, ಪದವೀಧರ ಹಾಗೂ ಪ್ರೌಢ ಶಾಲಾ ಶಿಕ್ಷಕಿಯರನ್ನು ಒಳಗೊಂಡಂತೆ ರಾಜ್ಯದಾದ್ಯಂತ ಸಂಘಟನೆ ಕಟ್ಟಿ ಇಂದು ರಾಷ್ಟ್ರೀಯ ಮಟ್ಟಕ್ಕೆ ಮಾತೆಯ ಹೆಸರನ್ನು ಕೊಂಡೊಯ್ಯಲು ಕಾರಣರಾದ ಸಂಘದ ಸಂಸ್ಥಾಪಕರಾದ ಡಾ.ಲತಾ ಎಸ್ ಮುಳ್ಳುರ ರವರನ್ನು ಈ ಸಂದರ್ಭದಲ್ಲಿ ನಾವೆಲ್ಲರೂ ನೆನೆಯಬೇಕಾಗಿದೆ.
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಿ. ರಾಜ್ಯಘಟಕ ಧಾರವಾಡ ಇದರ ವತಿಯಿಂದ ಪ್ರತಿವರ್ಷವೂ ರಾಜ್ಯಮಟ್ಟದಲ್ಲಿ ಕೊಡ ಮಾಡುವ ಏಕೈಕ ಪ್ರಶಸ್ತಿ “ಮಾತೆ ಅಕ್ಷರದವ್ವ ರಾಜ್ಯ ಪ್ರಶಸ್ತಿ” ಇದು ರಾಜ್ಯದ ಉನ್ನತ ಪ್ರಶಸ್ತಿಯಾಗಿದೆ. ಜಿಲ್ಲಾ ಹಾಗು ತಾಲೂಕ್ ಘಟಕಗಳ ವತಿಯಿಂದ ಸಹ ಆಯಾ ವ್ಯಾಪ್ತಿಯ ಉತ್ತಮ ಶಿಕ್ಷಕಿಯರಿಗೆ ವಾರ್ಷಿಕವಾಗಿ ಮಾತೆಯ ಹೆಸರಲ್ಲಿ ಪ್ರಶಸ್ತಿ ವಿತರಣೆ ಮಾಡಿ ಶಿಕ್ಷಕಿಯರಿಗೆ ಪ್ರೋತ್ಸಾಹ ಸಹ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ ಶಿಕ್ಷಕಿಯರ ಸಂಘದ ಬೇಡಿಕೆಯಂತೆ ಸರ್ಕಾರದ ವತಿಯಿಂದಲೂ ಮಾತೆಯ ಹೆಸರಲ್ಲಿ ಪ್ರತಿವರ್ಷ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ನೀಡಲಾಗುತ್ತಿದೆ. ಇಷ್ಟೆಲ್ಲಾ ಹೊರತಾಗಿ ಇನ್ನು ಅನೇಕ ಸಾಮಾಜಿಕ ಸಂಘ ಸಂಸ್ಥೆಗಳು ಕೂಡ ಮಾತೆಯ ಹೆಸರಲ್ಲಿ ಶಾಲಾ ಶಿಕ್ಷಕಿಯರಿಗೆ ಪ್ರಶಸ್ತಿಗಳನ್ನು ನೀಡುತಲಿದ್ದು ಪ್ರಶಂಸನೀಯವಾಗಿದೆ.

ಪ್ರಸ್ತುತ ದಿನಗಳಲ್ಲಿ ಕೆಲವು ಸಂಘ ಸಂಸ್ಥೆಗಳು ನಾನಾ ಪ್ರಶಸ್ತಿ ವಿತರಣಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಅವುಗಳಲ್ಲಿ ಸಾವಿತ್ರಿಬಾಯಿ ಫುಲೆ ಮಾತೆಯ ಹೆಸರಲ್ಲಿ ಸಹ ಪ್ರಶಸ್ತಿಗಳನ್ನು ಕೊಡಮಾಡಲಾಗುತ್ತಿದ್ದು, ಮಾತೆಯ ಹೆಸರಲ್ಲಿ ಕೊಡಮಾಡುವ ಪ್ರಶಸ್ತಿಗಳಿಗೆ ಪುರಸ್ಕೃತರನ್ನು ಆಯ್ಕೆ ಮಾಡುವ ಸಂಬಂಧ ಕೆಲವು ಕಾರ್ಯಕ್ರಮಗಳ ಆಯೋಜಕರು ಸರಿಯಾದ ಮಾನದಂಡ ಅನುಸರಿಸುತ್ತಿಲ್ಲ, ಆಯ್ಕೆ ಸಂಬಂಧ ಕೆಲವರಿಂದ ಲಾಬಿ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾತುಗಳು ಸಹ ಚರ್ಚೆಯಲ್ಲಿವೆ. ಹಾಗಾಗಿ ಇತರೆ ಸಂಘ ಸಂಸ್ಥೆಗಳು ಮಾತೆಯ ಹೆಸರಲ್ಲಿ ಕೊಡಮಾಡುವ ಯಾವುದೇ ನಾಮಿನೆಟೆಡ್ ಪ್ರಶಸ್ತಿಗಳು ನಮ್ಮ ಸಂಘಟನೆಗೆ ಸಂಬಂಧ ಇಲ್ಲವೆಂದು ಹಾಗೂ ಪ್ರಶಸ್ತಿಗೆ ಆಯ್ಕೆ ಸಂಬಂಧಿಸಿದ ಯಾವುದೇ ಲಾಬಿ, ಆಮಿಷ, ಆಯ್ಕೆ ಮಾನದಂಡಗಳಿಗೆ ನಮ್ಮ ಸಂಘಟನೆ ಕಾರಣವಾಗುವುದಿಲ್ಲ ಎಂದು ಆಪ್ತವಲಯವು ಸ್ಪಷ್ಟಪಡಿಸಲಾಗಿದೆ.

ಪ್ರಕಟಣೆ:
ಆಪ್ತ ಕಾರ್ಯದರ್ಶಿಗಳು
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ.ರಿ. ರಾಜ್ಯಘಟಕ ಧಾರವಾಡ.
