ಧಾರವಾಡ ಅಕ್ಟೋಬರ್.13.2025
ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಧಾರವಾಡ ಇದರ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ ಎಸ್ ಮುಳ್ಳೂರ್ ಅವರು ಇತ್ತೀಚೆಗೆ ಕೋಲಾರದ ಮಾಲೂರು ವ್ಯಾಪ್ತಿಯಲ್ಲಿ ಶಿಕ್ಷಕಿಯ ಮೇಲೆ ನಡೆದಿದ್ದ ಹಲ್ಲೆ ಉಲ್ಲೇಖಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಗೌರವಾನ್ವಿತ ಮಾನ್ಯ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.


ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕಿಯರ ಮೇಲೆ ಆಗುವ ದೌರ್ಜನ್ಯವನ್ನು, ಮಾನಸಿಕ ಹಾಗೂ ದೈಹಿಕ ಕಿರುಕುಳ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ತರಗತಿಗಳಲ್ಲಿ ನಿರ್ಭೀತರಾಗಿ ತಮ್ಮ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಒಂದು ಸುಭದ್ರತೆಯ ವಾತಾವರಣವನ್ನು ಕಲ್ಪಿಸಿ ಕೊಡುವಂತಹ ಒಂದು ಕಾನೂನಾತ್ಮಕ ರಕ್ಷಣೆಯನ್ನು ಸರ್ಕಾರದ ಆದೇಶದ ಮೂಲಕ ಕಲ್ಪಿಸಬೇಕೆಂದು ಪತ್ರದಲ್ಲಿ ಕೋರಲಾಗಿತ್ತು


ಈ ಮನವಿಗೆ ಸ್ಪಂದಿಸಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾನ್ಯ ಅಧ್ಯಕ್ಷರು ಗೌರವಾನ್ವಿತ ಶ್ರೀಮತಿ ನಾಗಲಕ್ಷ್ಮಿ ಚೌಧರಿ ರವರು ಇತೀಚೆಗೆ ಕೋಲಾರ ಮಾಲೂರಿನಲ್ಲಿ ನಡೆದಿದ್ದ ಶಿಕ್ಷಕಿಯ ಮೇಲಿನ ಹಲ್ಲೆ ಉಲ್ಲೇಖಿಸಿ ಅಂತಹ ಘಟನೆಗಳು ಮರುಕಳಿಸದಂತೆ ಶಾಲಾ ಶಿಕ್ಷಕಿಯರು ತಮ್ಮ ಕರ್ತವ್ಯವನ್ನು ಸುಭದ್ರತೆಯ ವಾತಾವರಣದಲ್ಲಿ ನಿರ್ವಹಿಸಲು ಕಾನೂನಾತ್ಮಕ ರಕ್ಷಣೆ ಒದಗಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಸ್ವಾಸ್ಥ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶನ ಮಾಡುವ, ಗುರುಮಾತೆಯರಿಗೆ ರಕ್ಷಣೆ ಒದಗಿಸುವಲ್ಲಿ ಧನಾತ್ಮಕವಾಗಿ ಚಿಂತಿಸಿ, ಸಂಘಟನೆನೊಂದಿಗೆ ಸಹಕರಿಸುತ್ತಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಗೌರವಾನ್ವಿತ ಡಾ. ನಾಗಲಕ್ಷ್ಮಿ ಚೌದರಿ ಅವರಿಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ವು ಸಮಸ್ತ ಶಿಕ್ಷಕಿಯರ ಪರವಾಗಿ ತುಂಬು ಹೃದಯದ ಅನಂತ ಧನ್ಯವಾದಗಳನ್ನು ಸಲ್ಲಿಸಿದೆ.
